ADVERTISEMENT

ಅತಂತ್ರ ಬದುಕಲ್ಲಿ ಬಹುರೂಪಿಗಳು

ಸುಧಾಕರ ಎಸ್.ತಳವಾರ, ಬೆಂಗಳೂರು
Published 9 ಡಿಸೆಂಬರ್ 2019, 19:45 IST
Last Updated 9 ಡಿಸೆಂಬರ್ 2019, 19:45 IST
ವಿವಿಧ ವೇಷತೊಟ್ಟು ಕಲೆ ಪ್ರದರ್ಶಿಸುವ ಬಹುರೂಪಿಗಳು (ಸಂಗ್ರಹ ಚಿತ್ರ)
ವಿವಿಧ ವೇಷತೊಟ್ಟು ಕಲೆ ಪ್ರದರ್ಶಿಸುವ ಬಹುರೂಪಿಗಳು (ಸಂಗ್ರಹ ಚಿತ್ರ)   

ಚಿಕ್ಕೋಡಿ: ಅಕ್ಷರಲೋಕದ ಅರಿವೇ ಇರದ ನಿರಕ್ಷರಕುಕ್ಷಿಗಳಾದರೂ ಕಲಾ ಪಾರಾಂಗತರಾದ ಅವರು, ತಲೆತಲಾಂತರದಿಂದ ಬಂದ ಕಲೆಯನ್ನೇ ನಂಬಿ ಬದುಕು ನಡೆಸುತ್ತಿದ್ದಾರೆ. ಆದರೆ, ಇಂದಿನ ತಾಂತ್ರಿಕ ಯುಗದಲ್ಲಿ ಇವರ ಕಲೆಗೆ ಬೆಲೆ ದೊರಕುತ್ತಿಲ್ಲ. ಹೀಗಾಗಿ, ಬಹುರೂಪಿಗಳ ಕಲಾ ಪರಂಪರೆ ಅವಸಾನದತ್ತ ಸಾಗಿದೆ.

ವಂಶಪಾರಂಪರ್ಯವಾಗಿ ಬಂದ ಕಲೆ ಮುಂದುವರಿಸಿಕೊಂಡು ಹೋಗುತ್ತಿರುವ ಬಹುರೂಪಿಗಳ ಜೀವನ ಇಂದು ಡೋಲಾಯಮಾನ ಸ್ಥಿತಿಯಲ್ಲಿದೆ. ಅವರ ಕಲಾಸೇವೆಗೆ ಇಂದಿನ ಜನಾಂಗದಿಂದ ಸೂಕ್ತ ಬೆಲೆ, ಪ್ರೋತ್ಸಾಹ ಸಿಗುತ್ತಿಲ್ಲ. ಆಧುನಿಕ ಜಗತ್ತಿನ ಬಿರುಗಾಳಿಗೆ ಸಿಲುಕಿರುವ ಬಹುರೂಪಿಗಳ ಸಂಸಾರವೆಂಬ ಹಡಗು ಬುಡಮೇಲಾಗುತ್ತಿದೆ. ನಾಡಿನ ಸಾಂಸ್ಕೃತಿಕ ಕೊಂಡಿಯೊಂದು ಕಳಚುವ ಹಂತ ತಲುಪಿದೆ.

ಅವರು ಯಾವೊಂದು ವಿದ್ವಾಂಸರಿಂದ ಸಂಗೀತದ ಪಾಠವನ್ನೂ ಕಲಿತಿಲ್ಲ. ಆದರೂ, ಸುಶ್ರಾವ್ಯವಾಗಿ ಹಾಡಬಲ್ಲರು. ಸೊಗಸಾಗಿ ವಾದ್ಯಗಳನ್ನು ನುಡಿಸಬಲ್ಲರು. ಜನ ಮೈಮರೆಯುವಂತೆ ಮೈಮಣಿಸಿ ಕುಣಿಯಬಲ್ಲರು. ಸ್ತ್ರೀ ವೇಷಧಾರಿಗಳಾಗಿ ಮಹಿಳೆಯರನ್ನೂ ಮೀರಿಸುವಂತೆ ನಟಿಸುವ ಕಲೆ ಅವರಲ್ಲಿ ಅಡಗಿದೆ. ಸನ್ನಿವೇಶದ ಪ್ರತಿ ಸಂಭಾಷಣೆಯೂ ಅವರ ನಾಲಿಗೆ ಮೇಲೆ ನರ್ತನವಾಡುತ್ತದೆ. ಅದು ಬಹುರೂಪಿಗಳಿಗೆ ರಕ್ತಗತವಾಗಿ ಬಂದ ಬಳುವಳಿಯಾಗಿದೆ.

ADVERTISEMENT

ಹಗಲುವೇಷಗಾರರು ಪೌರಾಣಿಕ ಪುರುಷರ ವೇಷಭೂಷಣಗಳಲ್ಲಿ ಬಣ್ಣ ಹಚ್ಚಿ ಬೀದಿಯಲ್ಲಿ ಕುಣಿಯತೊಡಗಿದರೆ ನಾಡಿನ ಇತಿಹಾಸವೇ ಕಣ್ಮುಂದೆ ಬಂದಂತಾಗುತ್ತದೆ. ವಿಶ್ವಾಮಿತ್ರ, ರಾವಣ, ಮೋಹಿನಿ–ಭಸ್ಮಾಸುರ, ನಳ ದಮಯಂತಿ, ಭೀಮಾಂಜನೇಯ ಯುದ್ಧ ಹೀಗೆ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಬರುವ ಸನ್ನಿವೇಶಗಳನ್ನು ಪ್ರದರ್ಶಸಿ ಮನರಂಜಿಸುತ್ತಾರೆ. ‘ಇತ್ತೀಚಿನ ವರ್ಷಗಳಲ್ಲಿ ಪ್ರತಿ ಮನೆಗಳಲ್ಲೂ ಪ್ರತಿಷ್ಠಾಪನೆ ಆಗಿರುವ ಟಿವಿಗಳಿಂದ ನಮ್ಮ ಕಲಾಪ್ರದರ್ಶನಕ್ಕೆ ಬೆಲೆ ಇಲ್ಲದಂತಾಗಿದೆ. ನಮ್ಮ ಪೂರ್ವಜರಿಗೆ ಸಿಗುತ್ತಿದ್ದ ಪ್ರೋತ್ಸಾಹ ನಮಗೆ ಸಿಗುತ್ತಿಲ್ಲ’ ಎಂಬ ಅಳಲು ಬಹುರೂಪಿಗಳದ್ದಾಗಿದೆ.

ರಾಗ, ತಾಳ, ಗತ್ತುಗಳೊಂದಿಗೆ ಮನಸೆಳೆಯುವ ಇವರ ಮನೋಜ್ಞ ಅಭಿನಯ ಜೀವನದಲ್ಲಿ ಎದುರಾಗುವ ಸುಖದುಃಖ, ಹಿಗ್ಗು, ಉತ್ಸಾಹ, ಮರುಕ, ಕ್ರೌರ್ಯ, ಸಂತಾಪಗಳ ಪ್ರತಿಬಿಂಬವಾಗಿರುತ್ತದೆ. ಸ್ವಂತ ಸೂರು ಇಲ್ಲದೇ ಜೋಪಡಿಗಳಲ್ಲೇ ಸಂಸಾರ ನಡೆಸುವ ಬಹುರೂಪಿಗಳ ಬಾಳು ಬರಡಾಗುತ್ತಿದೆ. ಅವಸಾನದ ಅಂಚಿನಲ್ಲಿರುವ ಹಗಲು ವೇಷಗಾರರ ಕಲೆಯನ್ನು ಪ್ರೋತ್ಸಾಹಿಸಿಕೊಂಡು ಹೋಗುವ ಅಗತ್ಯವಿದೆ. ಅವರ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಬೇಕಿದೆ.

ಸರ್ಕಾರ ಅಥವಾ ಸಂಘ ಸಂಸ್ಥೆಗಳು ಅವರ ನೆರವಿಗೆ ಧಾವಿಸಬೇಕಾಗಿದೆ. ಬಹುರೂಪಿಗಳ ಕಲೆ ಮತ್ತು ಕಸುಬಿಗೆ ಪ್ರಚೋದನೆ ನೀಡುವ ಅಗತ್ಯವಿದೆ. ನಾಗರಿಕರು ಕೂಡ ನಾಡಿನ ಇತಿಹಾಸ, ಪರಂಪರೆಯನ್ನು ಪ್ರತಿಬಿಂಬಿಸುವ ವೇಷಗಾರರ ಕಲೆಗೆ ಉತ್ತೇಜನ ನೀಡಬೇಕಾಗಿದೆ.

‘ಆಧುನಿಕತೆಗೆ ಮಾರು ಹೋಗುತ್ತಿರುವ ಸಮಾಜದಲ್ಲಿ ಬಹುರೂಪಿಗಳ ಬದುಕು ಅತಂತ್ರವಾಗಿದೆ. ಕಲೆಯನ್ನೇ ನೆಚ್ಚಿಕೊಂಡು ಜೀವನ ಬದುಕುವುದು ದುಸ್ತರವಾಗಿದೆ. ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಭವಿಷ್ಯ ರೂಪಿಸಲು ಆದ್ಯತೆ ನೀಡುತ್ತಿದ್ದೇವೆ’ ಎನ್ನುತ್ತಾರೆ ಚಿಕ್ಕೋಡಿ ತಾಲ್ಲೂಕಿನಲ್ಲಿ ಸಂಚರಿಸಿ ತಮ್ಮ ಬಹುರೂಪಿ ಕಲೆಯನ್ನು ಪ್ರದರ್ಶಿಸುತ್ತಿರುವ ಮಹಾರಾಷ್ಟ್ರದ ಕಲಾವಿದ ಮೋಹನ ಶೇಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.