ಸವದತ್ತಿ: ಮೋದಿ ಸರ್ಕಾರದ ಸದ್ಯದ ನಡೆಯಿಂದ ಸ್ವಾತಂತ್ರ್ಯ ನಂತರವೂ ಜೀತ ಪದ್ದತಿ ಇನ್ನೂ ಜೀವಂತವಾಗಿದೆ. ದುಡಿಯುವ ವರ್ಗವನ್ನು ಹೀನಾಯವಾಗಿ ನಡೆಸಿಕೊಂಡು ಕಾರ್ಮಿಕರನ್ನು ಗುಲಾಮಿ ಪದ್ಧತಿಗೆ ತಳ್ಳುತ್ತಿರುವ ಕೇಂದ್ರಕ್ಕೆ ಧಿಕ್ಕಾರವಿರಲಿ ಎಂದು ಸಿಐಟಿಯುನ ಪ್ರಮುಖ ಎಲ್.ಎಸ್. ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಕಾರ್ಮಿಕ ಕಾನೂನು ತಿದ್ದುಪಡಿ ವಿರೋಧಿಸಿ ರಾಷ್ಟ್ರ ವ್ಯಾಪಿಯ ಮುಷ್ಕರದ ಭಾಗವಾಗಿ ಸಿಐಟಿಯು, ಅಂಗನವಾಡಿ ನೌಕರರ ಸಂಘ, ಗ್ರಾ.ಪಂ ಡಿ.ವರ್ಗ ಸಿಬ್ಬಂದಿ, ಹಮಾಲರ ಸಂಘ ಹಾಗೂ ವಿವಿಧ ಸಂಘಟನೆಗಳಿಂದ ಇಲ್ಲಿನ ತಾಲ್ಲೂಕು ಆಡಳಿತ ಕಚೇರಿ ಎದುರು ಬುಧವಾರ ಜರುಗಿದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ಖಾಯಂ ಕೆಲಸ, ತೃಪ್ತಿದಾಯಕ ವೇತನ, ಭದ್ರತೆ ನೀಡದೇ, ಮುಷ್ಕರ ಹಾಗೂ ಸಂಘಟನೆಯ ಹಕ್ಕನ್ನು ಕಸಿದು ಕಾರ್ಮಿಕರನ್ನು ಗುಲಾಮರನ್ನಾಗಿಸಿ ಬಂಡವಾಳ ಶಾಹಿಗಳಿಗೆ ಅನುಕೂಲ ಕಲ್ಪಿಸುತ್ತಿದೆ. ಈ ಕಾನೂನುಗಳು ಸಂಪೂರ್ಣವಾಗಿ ಮಾನವ ಹಕ್ಕು ಉಲ್ಲಂಘಿಸಿವೆ ಎಂದರು.
ಸಂಘಟನೆ ಪ್ರಮುಖ ಫಕ್ರುದ್ಧೀನ್ ನದಾಫ ಮಾತನಾಡಿ, ಫಹಲ್ಗಾಮ್ ದಾಳಿ ವೇಳೆ ಸೂಚಿಸಿದ ಬೆಂಬಲವನ್ನೇ ಕೇಂದ್ರವು ಕಾರ್ಮಿಕ ಕಾನೂನು ತಿದ್ದುಪಡಿಗೆ ನೀಡಿವೆ ಎಂದು ಬಿಂಬಿಸುತ್ತಿದೆ. ತಿದ್ದಪಡಿ ಮಾಡಲು ಹೊರಟ ಕಾನೂನುಗಳಿಂದ ಕಾರ್ಮಿಕರ ಸೌಲಭ್ಯಗಳನ್ನು ಕಸಿಯಲಾಗುತ್ತಿದೆ. ಈ ನೀತಿಯನ್ನು ರಾಜ್ಯಸರಕಾರಗಳೂ ಸಹಿತ ಪಾಲಿಸಬೇಕೆನ್ನುವ ಕೇಂದ್ರದ ಒತ್ತಾಯ ಖಂಡನೀಯ ಎಂದರು.
ಇದಕ್ಕೂ ಮೊದಲು ಕೋಟೆ ಎದುರಿಗಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಆರಂಭಿಸಿದ ಪ್ರತಿಭಟನೆಯಲ್ಲಿ ಐದುನೂರಕ್ಕೂ ಹೆಚ್ಚು ಜನ ಕೇಂದ್ರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ, ರ‍್ಯಾಲಿ ನಡೆಸಿ ತಹಶೀಲ್ದಾರ್ ಕಚೇರಿ ತಲುಪಿದರು.
ಅಂಗನವಾಡಿ, ಸಿಐಟಿಯು, ಹಮಾಲರ ಸಂಘ, ಎಲ್‌ಐಸಿ ಸೇರಿ ಹಲವು ಸಂಘಟನೆಗಳು ಗ್ರೇಡ್ 2 ತಹಶೀಲ್ದಾರ ಎಮ್.ಎನ್. ಮಠದ ಅವರಿಗೆ ಮನವಿ ಸಲ್ಲಿಸಿದವು.
ಶ್ರೀಕಾಂತ ಹಟ್ಟಿಹೊಳಿ, ಬಸವರಾಜ ಕಪ್ಪಣ್ಣವರ, ಶಂಕ್ರಣ್ಣ ತೊರಗಲ್ಲ, ನಾಗಪ್ಪ ಪ್ರಭುನವರ, ಸಾವಿತ್ರಿ ಚಪ್ಪರದ, ಪಾರ್ವತಿ ಸಾಲಿಮಠ, ಸಂಗಮೇಶ ಸಿದ್ನಾಳ, ಸಿದ್ದಪ್ಪ ನಡುವಿನಹಳ್ಳಿ, ರವಿ ಚಂದರಗಿ, ಎಸ್.ಎಸ್. ವಾಂಗಿ, ಎಲ್.ಎಸ್. ದೇಸಾಯಿಪಟ್ಟಿ ಹಾಗೂ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.