ಬೆಳಗಾವಿ: ಬೈಲಹೊಂಗಲ ತಾಲ್ಲೂಕಿನ ಬೈಲವಾಡದ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ ಈವರೆಗೆ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. ಹಾಗಾಗಿ ಅದಕ್ಕೆ ಮುಚ್ಚುವ ಭೀತಿ ಎದುರಾಗಿದೆ.
2006–07ನೇ ಸಾಲಿನಲ್ಲಿ ಆರಂಭಗೊಂಡ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿದ್ದವು. ವಿದ್ಯಾರ್ಥಿಗಳ ಕೊರತೆಯಿಂದ ವಾಣಿಜ್ಯ ವಿಭಾಗ ಈ ಹಿಂದೆಯೇ ಮುಚ್ಚಿತ್ತು. ಆದರೆ, ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ಬೈಲವಾಡ ಹಾಗೂ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಈ ಹಿಂದೆ 60ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದರು.
ಆದರೆ, 2024–25ನೇ ಸಾಲಿನಲ್ಲಿ ಪಿಯು ಪ್ರಥಮ ವರ್ಷಕ್ಕೆ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆಯಲಿಲ್ಲ. ಪಿಯು ದ್ವಿತೀಯ ವರ್ಷದಲ್ಲಿ ವಿಜ್ಞಾನ ವಿಭಾಗದಲ್ಲಿದ್ದ 14, ಕಲಾ ವಿಭಾಗದಲ್ಲಿದ್ದ 11 ಸೇರಿದಂತೆ 25 ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬೇರೆ ಸರ್ಕಾರಿ ಕಾಲೇಜಿನ ಇತಿಹಾಸ ವಿಷಯದ ಉಪನ್ಯಾಸಕರೊಬ್ಬರನ್ನು ವಾರಕ್ಕೆ ಮೂರು ದಿನ ನಿಯೋಜನೆ ಆಧಾರದಲ್ಲಿ ಸರ್ಕಾರ ನೇಮಿಸಿತ್ತು.
ಉಳಿದ ವಿಷಯ ಬೋಧಿಸಲು ಒಬ್ಬ ಉಪನ್ಯಾಸಕರೂ ಇಲ್ಲದ್ದರಿಂದ 25 ವಿದ್ಯಾರ್ಥಿಗಳಿಗೂ ಬಸ್ ಪಾಸ್‌ನ ವ್ಯವಸ್ಥೆ ಮಾಡಿ, ಬೈಲಹೊಂಗಲದ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದಲು ಅವಕಾಶ ಕಲ್ಪಿಸಲಾಗಿತ್ತು.
ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿ ತಿಂಗಳಾದರೂ, ಪಿಯು ಪ್ರಥಮ ಮತ್ತು ದ್ವಿತೀಯ ವರ್ಷದ ತರಗತಿಗೆ ಒಬ್ಬರೂ ಪ್ರವೇಶ ಪಡೆದಿಲ್ಲ. ಹಾಗಾಗಿ ಕಾಲೇಜು ಮುಚ್ಚುವ ಸಾಧ್ಯತೆ ಇದೆ.
ದಾಖಲಾತಿ ಕುಸಿತಕ್ಕೆ ಕಾರಣವೇನು?: ‘ಬೈಲವಾಡದಿಂದ ಐದೇ ಕಿ.ಮೀ ದೂರದಲ್ಲಿ ಬೈಲಹೊಂಗಲ ಪಟ್ಟಣವಿದೆ. ಪಿಯು ಶಿಕ್ಷಣಕ್ಕಾಗಿ ಅಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿವೆ. ಹಾಗಾಗಿ ಸ್ಥಳೀಯವಾಗಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿಲ್ಲ’ ಎಂದು ಉಪನ್ಯಾಸಕರು ಹೇಳುತ್ತಾರೆ.
ಆದರೆ, ‘ಇತ್ತೀಚಿನ ವರ್ಷಗಳಲ್ಲಿ ಒಬ್ಬೊಬ್ಬರಾಗಿ ಉಪನ್ಯಾಸಕರು ಇಲ್ಲಿಂದ ವರ್ಗಾವಣೆಗೊಂಡರು. ಆದರೆ, ತೆರವಾದ ಹುದ್ದೆ ಭರ್ತಿಯಾಗಲಿಲ್ಲ. ಈಗ ಕಾಲೇಜಿನಲ್ಲಿ ಪಾಠ ಮಾಡಲು ಒಬ್ಬ ಕಾಯಂ ಉಪನ್ಯಾಸಕರೂ ಇಲ್ಲ. ನಿಯೋಜನೆ ಆಧಾರದಲ್ಲಿ ಇರುವವರು ವಾರಕ್ಕೆ ಮೂರೇ ದಿನ ಬರುತ್ತಾರೆ. ಹೀಗಾದರೆ ಕಲಿಕಾ ಪ್ರಕ್ರಿಯೆ ನಡೆಯುವುದು ಹೇಗೆ? ಹಾಗಾಗಿ ಭವಿಷ್ಯದ ದೃಷ್ಟಿಯಿಂದ ಬೈಲಹೊಂಗಲದ ಕಾಲೇಜಿಗೆ ಹೋಗುವುದು ಅನಿವಾರ್ಯವಾಗಿದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.
ದಾಖಲಾತಿಗಾಗಿ ಈಗಲೂ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಗ್ರಾಮಸ್ಥರ ಮನವೊಲಿಸುತ್ತಿದ್ದೇವೆ. ಆದರೆ ಯಾರೂ ತಮ್ಮ ಮಕ್ಕಳನ್ನು ಇಲ್ಲಿ ದಾಖಲಿಸುತ್ತಿಲ್ಲಎಂ.ಎನ್.ಕಿಲಾರಿ ಪ್ರಭಾರ ಪ್ರಾಚಾರ್ಯ
ಬೈಲವಾಡ ದೇವಲಾಪುರ ಕಾಲೇಜುಗಳಲ್ಲಿ ದಾಖಲಾತಿಗಾಗಿ ಪ್ರಯತ್ನ ನಡೆಸಿದ್ದೇವೆ. ಒಂದುವೇಳೆ ಯಾರೂ ಪ್ರವೇಶ ಪಡೆಯದಿದ್ದರೆ ಜಿಲ್ಲೆಯಲ್ಲಿ ಅಗತ್ಯವಿರುವ ಗ್ರಾಮಗಳಿಗೆ ಕಾಲೇಜುಗಳನ್ನು ಸ್ಥಳಾಂತರಿಸುತ್ತೇವೆಎಂ.ಎಂ.ಕಾಂಬಳೆ ಡಿಡಿಪಿಯು ಬೆಳಗಾವಿ
ದೇವಲಾಪುರ ಕಾಲೇಜಿನದ್ದೂ ಇದೇ ಕತೆ:
1992ರಲ್ಲಿ ಸ್ಥಾಪನೆಯಾದ ಬೈಲಹೊಂಗಲ ತಾಲ್ಲೂಕಿನ ದೇವಲಾಪುರದ ಸರ್ಕಾರಿ ಪಿಯು ಕಾಲೇಜು ಕೂಡ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದೆ. ಇಲ್ಲಿಯೂ ಒಬ್ಬ ಕಾಯಂ ಉಪನ್ಯಾಸಕರೂ ಇಲ್ಲ. ಬೇರೆ ಕಾಲೇಜಿನ ಉಪನ್ಯಾಸಕರನ್ನೇ ವಾರಕ್ಕೆ ಮೂರು ದಿನ ನಿಯೋಜನೆ ಆಧಾರದಲ್ಲಿ ನೇಮಿಸಲಾಗಿದೆ. ‘ಕಳೆದ ವರ್ಷ ನಮ್ಮಲ್ಲಿ ಪಿಯು ಪ್ರಥಮ ವರ್ಷಕ್ಕೆ 11 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ಪೈಕಿ ಒಬ್ಬ ವಿದ್ಯಾರ್ಥಿ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದರೆ 10 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಪೈಕಿ ಮೂವರಷ್ಟೇ ಪಿಯು ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ಪಿಯು ಪ್ರಥಮ ವರ್ಷಕ್ಕೆ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ’ ಎಂದು ಪ್ರಭಾರ ಪ್ರಾಚಾರ್ಯ ಹನುಮಂತ ಭಜಂತ್ರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.