ADVERTISEMENT

ಬೆಳಗಾವಿ: ಅಳಿಸಿ ಹೋಗುತ್ತಿರುವ ಕ್ವಾರಂಟೈನ್ ಸೀಲ್ ಇಂಕ್‌!

​ಪ್ರಜಾವಾಣಿ ವಾರ್ತೆ
Published 14 ಮೇ 2020, 14:09 IST
Last Updated 14 ಮೇ 2020, 14:09 IST

ಅಥಣಿ: ‘ತಾಲ್ಲೂಕು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡುವ ಸೀಲ್ ಇಂಕ್‌ (ಶಾಯಿ) ಅನ್ನು ತಕ್ಷಣವೇ ಅಳಿಸಬಹುದು’ ಎಂದು ಸಾರ್ವಜನಿಕರು ತಾಲ್ಲೂಕು ವೈದ್ಯಾಧಿಕಾರಿಗೆ ತರಾಟೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.

‘ಹೊರ ರಾಜ್ಯಗಳಿಂದ ಜನರು ತಮ್ಮ ಊರುಗಳಿಗೆ ತೆರಳಲು ಸರ್ಕಾರ ಅನುಮತಿ ನೀಡಿದೆ. ಪರ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದವರನ್ನು ತಾಲ್ಲೂಕು ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿ ಅವರ ಮೇಲೆ ನಿಗಾ ವಹಿಸಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗುತ್ತದೆ. ಹೋಂ ಕ್ವಾರಂಟೈನ್ ಇರಬೇಕು ಎಂದು ಕೈಮೇಲೆ ಸೀಲ್ ಹಾಕುತ್ತಾರೆ. ಆದರೆ ಅದರಲ್ಲಿನ ಶಾಯಿಯನ್ನು ತಕ್ಷಣವೇ ಅಳಿಸಿಬಹುದಾಗಿದೆ. ಇದರಿಂದಾಗಿ ಕ್ವಾರಂಟೈನ್ ಇರಬೇಕಾದವರಿಗೆ ಅನುಕೂಲ ಆಗುತ್ತಿದೆ. ಅವರು ಎಲ್ಲಿ ಬೇಕಾದರೂ ಓಡಾಡುತ್ತಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ’ ಎಂದು ಜನರು ಆತಂಕ ವ್ಯಕ್ತ‍ಪಡಿಸಿದರು.

ಕೆಲವರು ವೈದ್ಯಾಧಿಕಾರಿ ಮುಂದೆಯೇ ಸೀಲ್ ಹಾಕಿಸಿ, ಶಾಯಿಯನ್ನು ಅಳಿಸಿ ಮನವರಿಕೆ ಮಾಡಿಕೊಟ್ಟು ಸಿಬ್ಬಂದಿಯನ್ನು ಪೇಚಿಗೆ ಸಿಲುಕಿಸಿದರು.

ADVERTISEMENT

‘ಚುನಾವಣೆ ಸಂದರ್ಭದಲ್ಲಿ ಬಳಸಲು ಅಳಿಸಲಾಗದ ಶಾಯಿ ಇದಾಗಿದೆ. ಹಾಕಿದ ತಕ್ಷಣವೇ ಅಳಿಸಿದರೆ ಅಳಿಸಿ ಹೋಗಬಹುದು. ಆದರೆ, ಒಣಗುವವರೆಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಎಂ.ಎಸ್. ಕೊಪ್ಪದ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.