ರಾಯಬಾಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ
ತರಗತಿ ಕೊಠಡಿಗಳ ಮಂಜೂರಾತಿಗಾಗಿ ಆಗ್ರಹಿಸಿ ಮೌನ ಕಾಲ್ನಡಿಗೆ ಹಾಗೂ ಉಪವಾಸ ಪ್ರತಿಭಟನೆ ನಡೆಸಿದ್ದ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಗುರುವಾರ ಸೇವೆಯಿಂದ ಅಮಾನತು ಮಾಡಲಾಗಿದೆ.
‘ಸರ್ಕಾರಿ ನೌಕರನಾಗಿ ಅದರಲ್ಲೂ ಮುಖ್ಯಶಿಕ್ಷಕನಾಗಿ ಇಲಾಖೆ ವಿರುದ್ಧ ಪ್ರತಿಭಟಿಸಿ, ಇಲಾಖೆ ಹಾಗೂ ಸರ್ಕಾರಕ್ಕೆ ಮುಜು’ಗರ ಉಂಟು ಮಾಡಿದ್ದೀರಿ. ಈಗಾಗಲೇ ಎರಡು ಕೊಠಡಿ ಮಂಜೂರು ಆಗಿವೆ. ಶೀಘ್ರ ಕೆಲಸಗಳು ಆರಂಭವಾಗಲಿವೆ ಎಂದು ತಿಳಿ ಹೇಳಿದರೂ ಅನುಚಿತವಾಗಿ ವರ್ತಿಸಿದ್ದೀರಿ. ಈ ಎಲ್ಲದರ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ’ ಎಂದು ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ.ಆರ್ ತಿಳಿಸಿದ್ದಾರೆ.
ಇದಕ್ಕೆ ವೀರಣ್ಣ ಮಡಿವಾಳರ, ‘ಶಾಲೆಯ ಅಭಿವೃದ್ಧಿಗೆ 9 ವರ್ಷಗಳಿಂದ ಶ್ರಮಿಸುತ್ತಿದ್ದೇನೆ. ಇದಕ್ಕೆ ಸಾಕ್ಷಿಯಾಗಿ ಶಾಲೆಗೆ ಹಲವು ಪ್ರಶಸ್ತಿಗಳು ಬಂದಿವೆ. ಸರಿಯಾದ ವ್ಯವಸ್ಥೆ ಇಲ್ಲದೇ ಕೂರಲು ಕಷ್ಟ ಎಂದು ಮಕ್ಕಳು ಹೇಳಿದ ಕಾರಣಕ್ಕೆ ಪ್ರತಿಭಟನೆ ನಡೆಸಿದೆ’ ಎಂದಿದ್ದಾರೆ.
‘ನಾನು ಸರಕಾರದ ಘನತೆ ಹೆಚ್ಚಿಸುವ ಕೆಲಸ ಮಾಡಿದ್ದೇನೆ, ಇಲಾಖೆ ಅಥವಾ ಸರ್ಕಾರಕ್ಕೆ ಮುಜುಗರ ತಂದಿಲ್ಲ. ನಾಲ್ಕು ಕೊಠಡಿ ನಿರ್ಮಿಸಿಕೊಡಿ. ಕನಸಿನ ಶಾಲೆ ನಿರ್ಮಿಸಲು ನಮ್ಮ ಜೊತೆ ಕೈಜೋಡಿಸಿ’ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.