
ಗೋಕಾಕ: ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಕೆಲವು ರೈಲುಗಳ ವೇಳೆ ಬದಲಾವಣೆ ಮಾಡಲು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬೆಂಗಳೂರಿನಿಂದ ರಾತ್ರಿ 9ಕ್ಕೆ ಹೊರಟು ಬೆಳಗಾವಿ ನಗರವನ್ನು ಮಾರನೇ ದಿನ ಬೆಳಿಗ್ಗೆ 5.45ರ ನಂತರ ತಲುಪುತ್ತಿರುವ ಸೂಪರ್ ಫಾಸ್ಟ್ ರೈಲು ಸಂಖ್ಯೆ 20654 ಮೂಲಕ ಆಗಮಿಸುವ ಬೆಳಗಾವಿ ಜಿಲ್ಲೆಯ ಪ್ರಯಾಣಿಕರು ಪಾಶ್ಚಾಪುರ, ಗೋಕಾಕ-ರೋಡ್, ಘಟಪ್ರಭಾ, ರಾಯಭಾಗ, ಕುಡಚಿ ಮೊದಲಾದೆಡೆ ಪ್ರಯಾಣಿಸಲು ಅನುಕೂಲವಾಗುವಂತೆ, ಪ್ರಸ್ತುತ ಬೆಳಿಗ್ಗೆ 5.45ಕ್ಕೆ ಬೆಳಗಾವಿಯಿಂದ ಹೊರಡುತ್ತಿರುವ ಬೆಳಗಾವಿ-ಮೀರಜ್ ಪ್ಯಾಸೆಂಜರ್ ರೈಲಿನ ಸಮಯವನ್ನು ಬೆಳಿಗ್ಗೆ 6.15 ಅಥವಾ 6.30ಕ್ಕೆ ಬದಲಾವಣೆ ಮಾಡುವಂತೆ ಪ್ರಯಾಣಿಕರಿಂದ ಕೇಳಿ ಬಂದ ಬೇಡಿಕೆ ಕುರಿತ ಪ್ರಶ್ನೆಗೆ, ಇಷ್ಟರಲ್ಲೇ ಜರುಗಲಿರುವ ಹುಬ್ಬಳ್ಳಿಯ ನೈಋತ್ಯ ರೈಲ್ವೆ ಬಳಕೆದಾರರ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವ ಮಾಡುವೆʼ ಎಂದು ಭರವಸೆ ನೀಡಿದರು.
ಹುಬ್ಬಳ್ಳಿ-ದಾದರ-ಹುಬ್ಬಳ್ಳಿ (ರೈಲು ಸಂಖ್ಯೆ; 17317 ಮತ್ತು 17318) ರೈಲಿಗೆ ಗೋಕಾಕ-ರೋಡ್ ರೈಲ್ವೆ ನಿಲ್ದಾಣದಲ್ಲಿ ಒಂದು ನಿಮಿಷದ ನಿಲುಗಡೆ ಒದಗಿಸುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ಒದಗಿಸಲು ಅಧಿಕಾರಿಗಳು ಸಮ್ಮತಿಸುವ ಸಾಧ್ಯತೆಗಳು ಅತಿ ವಿರಳ. ಆದರೂ ಈ ವಿಷಯವನ್ನು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡುವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.