ADVERTISEMENT

ಮಳೆ: ಹಾನಿಗೊಳಗಾದ ದ್ರಾಕ್ಷಿ ಬೆಳೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 12:38 IST
Last Updated 19 ಅಕ್ಟೋಬರ್ 2020, 12:38 IST
ತೆಲಸಂಗ ಗ್ರಾಮದ ರಾಮು ಬಳ್ಳೋಳ್ಳಿ ಅವರ  ದ್ರಾಕ್ಷಿ ತೋಟದಲ್ಲಿ ಎಲೆಗಳು ಉದರಿರುವ ದೃಶ್ಯ
ತೆಲಸಂಗ ಗ್ರಾಮದ ರಾಮು ಬಳ್ಳೋಳ್ಳಿ ಅವರ  ದ್ರಾಕ್ಷಿ ತೋಟದಲ್ಲಿ ಎಲೆಗಳು ಉದರಿರುವ ದೃಶ್ಯ   

ತೆಲಸಂಗ: ಹೋಬಳಿಯಲ್ಲಿ ದ್ರಾಕ್ಷಿ ಗಿಡಗಳು ಹೂವು ಬಿಡುವ ಮುಂಚೆಯೇ ಎಲೆ ಉದುರುವ ರೋಗಕ್ಕೆ ತುತ್ತಾಗಿದ್ದು, ಸತತ ಮಳೆಯಿಂದಾಗಿ ಮತ್ತಷ್ಟು ಹಾನಿಗೊಳಗಾಗಿವೆ.

‘ದ್ರಾಕ್ಷಿ ಬೆಳೆ ಶೇ 90ರಷ್ಟು ನಾಶವಾಗಿದೆ. ತಕ್ಷಣವೇ ಸರ್ವೇ ಕಾರ್ಯ ನಡೆಯಬೇಕು. ಕೂಡಲೇ ಸಮರ್ಪಕ ವಿತರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎನ್ನುವುದು ಬೆಳೆಗಾರರ ಆಗ್ರಹವಾಗಿದೆ.

‘ಕಳೆದ ವರ್ಷ ಬಾಧಿಸಿದ್ದ ಎಲೆ ಉದುರುವ ರೋಗ ಈ ಬಾರಿಯೂ ಮುಂದುವರಿದಿದೆ. ರಕ್ಷಣೆಗೆ ಸತತ ಔಷಧಿ ಸಿಂಪಡಿಸಬೇಕಿದೆ. ಆದರೆ ಬಿಸಿಲು ಇಲ್ಲದಿರುವುದರಿಂದಾಗಿ, ಸಿಂಪಡಿಸಿದ ಔಷಧಿ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುತ್ತಿದೆ. ಇದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ತಿಳಿಸುತ್ತಾರೆ ಅವರು.

ADVERTISEMENT

‘ಹಲವು ವರ್ಷಗಳಿಂದ ಮಳೆಯ ಕೊರತೆ, ಅಕಾಲಿಕ ಮಳೆ, ಮೋಡ ಕವಿದ ವಾತಾವರಣ, ಎಲೆ ಉದುರುವಿಕೆ... ಇದರಲ್ಲಿ ಒಂದಿಲ್ಲೊಂದು ಸಮಸ್ಯೆ ದ್ರಾಕ್ಷಿ ಬೆಳೆಗಾರರ ಸಂಕಷ್ಟಕ್ಕೆ ಕಾರಣವಾಗಿವೆ’ ಎನ್ನುತ್ತಾರೆ ಅವರು.

ತೆಲಸಂಗ ಹೋಬಳಿಯಲ್ಲಿ 4,500 ಹೆಕ್ಟೇರ್ ದ್ರಾಕ್ಷಿ ಬೆಳೆಯಲಾಗಿದೆ.

‘ಲಾಕ್‍ಡೌನ್ ಪರಿಣಾಮ ಮಾರಲಾಗಲಿಲ್ಲ. ಅಲ್ಪಸ್ವಲ್ಪ ಇದ್ದ ಒಣ ದ್ರಾಕ್ಷಿ ಇನ್ನೂ ಮಾರಾಟವಾಗದೆ ಕೋಲ್ಡ್ ಸ್ಟೋರೆಜಲ್ಲಿದೆ. ಸ್ಟೋರೇಜ್‌ಗೆ ಬಾಡಿಗೆ ಕೊಡುತ್ತಿದ್ದೇವೆ. ಪ್ರಸಕ್ತ ವರ್ಷ ಎಲೆ ಉದುರುತ್ತಿದೆ. ಅಲ್ಲೊಂದು ಇಲ್ಲೊಂದು ಇದ್ದ ಕಡ್ಡಿಯೂ ಈ ಮಳೆ ಮತ್ತು ತಂಪಾದ ವಾತಾವರಣಕ್ಕೆ ಹಾಳಾಗುತ್ತಿದೆ. ಸರ್ಕಾರ ಮತ್ತು ವಿಮಾ ಕಂಪನಿಗಳು ಕೈ ಹಿಡಿಯದಿದ್ದರೆ ನಮ್ಮ ಗೋಳು ಕೇಳಲಾಗದು’ ಎಂದು ಬೆಳೆಗಾರ ರಾಮು ಬಳ್ಳೋಳ್ಳಿ ತಿಳಿಸಿದರು.

‘ದ್ರಾಕ್ಷಿಯಲ್ಲಿ ಎಲೆ ಉದರುವಿಕೆ ರೋಗ ಕಾಣಿಸಿಕೊಂಡಿದ್ದು, ವಿಶ್ವವಿದ್ಯಾಲಯದ ತಜ್ಞರು ಬಂದು ಸಂಶೋಧನೆ ಮಾಡಿದ್ದಾರೆ. ಹಾನಿಗೆ ಸಂಬಂಧಿಸಿದಂತೆ ಈಗಾಗಲೇ ಸರ್ವೇ ನಡೆದಿದೆ. ಅರ್ಧದಷ್ಟು ಗ್ರಾಮಗಳ ಜಮೀನುಗಳಲ್ಲಿ ಆಗಿರುವ ಹಾನಿ ಮಾಹಿತಿ ತಂತ್ರಾಂಶದಲ್ಲಿ ದಾಖಲಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಅಕ್ಷಯಕುಮಾರ ಉಪಾಧ್ಯಾಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.