ADVERTISEMENT

ನನ್ನ ನಿರೀಕ್ಷೆಗೂ ಮೀರಿ ಪಕ್ಷ ಅವಕಾಶ ನೀಡಿದೆ: ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 7:47 IST
Last Updated 13 ಜೂನ್ 2020, 7:47 IST
ಈರಣ್ಣಾ ಕಡಾಡಿ (ಸಂಗ್ರಹ ಚಿತ್ರ)
ಈರಣ್ಣಾ ಕಡಾಡಿ (ಸಂಗ್ರಹ ಚಿತ್ರ)   

ಬೆಳಗಾವಿ: ‘ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುವೆ. ಕೇಂದ್ರದಿಂದ ಹೆಚ್ಚಿನ ಅನುದಾನ ತರಲು ಹಾಗೂ ಆ ಅನುದಾನದ ಸದ್ಬಳಕೆಗೆ ಪ್ರಯತ್ನಿಸುವೆ. ನನ್ನ ನಿರೀಕ್ಷೆಗೂ ಮೀರಿ ಪಕ್ಷ ಅವಕಾಶ ನೀಡಿದೆ’ ಎಂದು ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ರಾಜ್ಯಸಭೆಗೆ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ನಗರಕ್ಕೆ ಬಂದ ಅವರು, ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ನಮ್ಮಲ್ಲಿ ಬಣ ರಾಜಕೀಯ ಎನ್ನುವುದು ಇಲ್ಲ. ಚುನಾವಣೆ ಸಂದರ್ಭದಲ್ಲಿ ಬಹಳಷ್ಟು ಜನ ಆಕಾಂಕ್ಷಿಗಳು ಟಿಕೆಟ್‌ ಕೇಳುವುದು ಸಹಜ. ಅಂತಿಮ ತೀರ್ಮಾನ ವರಿಷ್ಠರಿಗೆ ಬಿಟ್ಟಿದ್ದು. ವರಿಷ್ಠರು ಆಯ್ಕೆ ಮಾಡಿದ ನಂತರ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ. ರಾಜ್ಯಸಭೆಗೆ ಆಕಾಂಕ್ಷಿಗಳಾಗಿದ್ದ ಪ್ರಭಾಕರ ಕೋರೆ ಹಾಗೂ ರಮೇಶ ಕತ್ತಿ ಅವರು ಕೂಡ ನನ್ನನ್ನು ಆಯ್ಕೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿಯು ಕಾರ್ಯಕರ್ತರ ಪಕ್ಷವೆನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರ ನಿರೀಕ್ಷೆಯಂತೆ ಕೆಲಸ ಮಾಡುವೆ. ಹಿಂದೆ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ, ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಈ ಅನುಭವದ ಮೇರೆಗೆ ಮುಂದೆಯೂ ಕೆಲಸ ಮಾಡುವೆ’ ಎಂದು ನುಡಿದರು.

‘ರಾಜ್ಯಸಭೆ ಕುರಿತು ಇದುವರೆಗೆ ಬೇರೆ ರೀತಿಯ ಕಲ್ಪನೆ ಇತ್ತು. ನನ್ನನ್ನು ಆಯ್ಕೆ ಮಾಡುವ ಮೂಲಕ ಸಾಮಾನ್ಯ ಕಾರ್ಯಕರ್ತರೂ ಇದಕ್ಕೆ ಪ್ರವೇಶಿಸಬಹುದು ಎನ್ನುವುದನ್ನು ಪಕ್ಷ ತೋರಿಸಿದೆ. ಈ ಮೂಲಕ ಬಿಜೆಪಿ ಹೊಸ ಪರಂಪರೆ ಹಾಕಿ ಕೊಟ್ಟಿದೆ. ಇದರ ಬಗ್ಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ. ಅಲ್ಲಿನ ಕಾರ್ಯಕರ್ತರು ಕೂಡ ತಮಗೆ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ’ ಎಂದು ಹೇಳಿದರು.

ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮುಖಂಡರಾದ ಸಂಜಯ ಪಾಟೀಲ, ಎಂ.ಬಿ. ಝಿರಲಿ, ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.