ಸವದತ್ತಿ: ಇಲ್ಲಿನ ಕೆಂಚಲಾರಕೊಪ್ಪದ ಮಾರುತಿ ದೇವಸ್ಥಾನದಲ್ಲಿ ಭಾನುವಾರ ಸಾವಿರಾರು ಹಿಂದೂ ಭಕ್ತಾದಿಗಳ ಜೊತೆಗೆ ಮುಸ್ಲಿಂ ಸಮುದಾಯವರೂ ಕೈಜೋಡಿಸಿ ರಾಮನವಮಿಯನ್ನು ಹರ್ಷೋದ್ಘಾರಗಳ ನಡುವೆ ವಿಜೃಂಭಣೆಯಿಂದ ಆಚರಿಸಿದರು.
ದೇವಸ್ಥಾನದಲ್ಲಿ ಮುಂಜಾನೆ ಧಾರ್ಮಿಕ ಹೋಮ-ಹವನಗಳು, ಮಹಾಭಿಷೇಕ, ವಿವಿಧ ಪೂಜಾದಿ ಕೈಂಕರ್ಯಗಳು ವಿಧಿವತ್ತಾಗಿ ಜರುಗಿದವು. ಮುಸ್ಲಿಮರು ಸಕಲ ಕಾರ್ಯದಲ್ಲಿ ಭಾಗಿಯಾಗಿ ಸೌಹಾರ್ದದ ರಾಮನವಮಿಗೆ ಸಾಕ್ಷಿಯಾದರು.
ರಾಮನವಮಿ ನಿಮಿತ್ತ ರಾಮ ಮತ್ತು ಮಾರುತಿ ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿಶೇಷ ಹೂವಿನ ಅಲಂಕಾರದಲ್ಲಿ ಶ್ರೀರಾಮನ ಪ್ರತಿಮೆ ಕಂಗೊಳಿಸಿತು. ನಗರದ ಸಕಲ ಭಕ್ತರು ಶ್ರೀರಾಮನ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿದರು. ರಾಮನವಮಿಯಲ್ಲಿ ಮುಸ್ಲಿಮರು ಸಂಜೆಯವರೆಗೂ ಭಕ್ತಾಧಿಗಳಿಗೆ ತಂಪುಪಾನೀಯ ವಿತರಿಸಿದ್ದು ವಿಶೇಷವಾಗಿತ್ತು.
ಭವ್ಯ ರಾಮನ ಪ್ರತಿಮೆಯೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡ ಜನರು ಜಾಲಾತಾಣದಲ್ಲಿ ಹಂಚಿಕೊಂಡರು.
ಈ ವೇಳೆ ಕಾಂಗ್ರೆಸ್ ಮುಖಂಡ ಅಶ್ವತ್ ವೈದ್ಯ, ಬಸವರಾಜ ಅರಮನಿ, ಎಂ.ಕೆ. ಬೇವೂರ, ಮಕ್ತುಮಸಾಬ ಹಲೀಮನವರ, ಮೌಲಾಸಾಬ ಹಲೀಮನವರ, ಸುನೀಲ ಚಲವಾದಿ, ಮಂಜುನಾಥ ಪಾಚಂಗಿ, ಭೀಮಸಿ ಪರಸನಾಯ್ಕರ, ನಾಗಪ್ಪ ಪರಸನಾಯ್ಕರ, ಗೌಡಪ್ಪ ಪಾಟೀಲ, ಬಸವರಾಜ ಜೋಗೆನ್ನವರ, ಮಾರುತಿ ಪೂಜೇರ, ಎಫ್.ವೈ. ಗಾಜಿ, ಗದಿಗೆಪ್ಪ ಖಾನನ್ನವರ, ಅರ್ಜುನ ಅಮೋಜಿ ಹಾಗೂ ಪ್ರಮುಖರು ಇದ್ದರು.
ಸಾಯಿ ಮಂದಿರದಲ್ಲಿ ರಾಮನವಮಿ:
ರಾಮನವಮಿ ನಿಮಿತ್ತ ಇಲ್ಲಿನ ಸೌಗಂಧಿಪುರದಲ್ಲಿರುವ ಸಾಯಿ ಮಂದಿವನ್ನು ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಸಾಯಿ ಬಾಬಾ ಅವರ ಸಕಲ ಭಕ್ತರು ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿದರು. ಮುಂಜಾನೆ ಕಾಕಡಾರತಿ, ಭಕ್ತರಿಂದ ಕ್ಷೀರಾಭಿಷೇಕ ಮತ್ತು ಪವಿತ್ರ ಜಲಾಭಿಷೇಕ, ಸಾಯಿಬಾಬಾ ಅವರಿಗೆ ಅಲಂಕಾರ ಪೂಜಾ, ಆರತಿ, ಸಾಯಿ ನಾಮ ಜಪ, ಭಜನೆ, ಪಾರಾಯಣ ಜರುಗಿತು. ಸುಮಂಗಲೆಯರಿಗೆ ಉಡಿ ತುಂಬಿ ಸಾಯಿಬಾಬಾರ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕುವ ಮೂಲಕ ವಿಶೇಷವಾಗಿ ರಾಮನವಮಿ ಆಚರಿಸಲಾಯಿತು.
ಈ ವೇಳೆ ಡಾ. ಸಿ.ಬಿ. ನಾವದಗಿ, ಸಿ.ಜಿ. ತುರಮರಿ, ಎಸ್.ಬಿ. ಯಲ್ಲರಡ್ಡಿ, ಎಮ್. ಎಸ್. ಕಾರದಗಿ, ಡಾ.ಎನ್.ಸಿ. ಬೆಂಡಿಗೇರಿ, ಜಿ.ಐ. ಹಿರೇಮಠ, ಡಾ.ರಮೇಶ ದಾನಗೌಡ ಹಾಗೂ ಪ್ರಮುಖ ಇದ್ದರು.
ವಿಶೇಷ ಅಲಂಕಾರದಲ್ಲಿ ಶ್ರೀ ರಾಮನ ಪ್ರತಿಮೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.