ADVERTISEMENT

ಬೆಳಗಾವಿ: ಆತ್ಮಶುದ್ಧಿಯ ಮಾಸ ರಂಜಾನ್

ವಿವಿಧೆಡೆ ಮಸೀದಿಗಳಿಗೆ ಸಿಂಗಾರ, ವಿಶೇಷ ಪ್ರಾರ್ಥನೆ; ಇಫ್ತಾರ್ ಕೂಟಗಳ ಆಯೋಜನೆ

ಇಮಾಮ್‌ಹುಸೇನ್‌ ಗೂಡುನವರ
Published 23 ಮಾರ್ಚ್ 2025, 6:45 IST
Last Updated 23 ಮಾರ್ಚ್ 2025, 6:45 IST
ರಂಜಾನ್‌ ಅಂಗವಾಗಿ ಬೆಳಗಾವಿಯ ಮಾರುಕಟ್ಟೆ ಪ್ರದೇಶ ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿರುವುದು   ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ರಂಜಾನ್‌ ಅಂಗವಾಗಿ ಬೆಳಗಾವಿಯ ಮಾರುಕಟ್ಟೆ ಪ್ರದೇಶ ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿರುವುದು   ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಇಸ್ಲಾಂ ಧರ್ಮದ ಪವಿತ್ರ ಮಾಸ ರಂಜಾನ್‌. ಇದರ ಪ್ರಯುಕ್ತ, ಜಿಲ್ಲೆಯ ಮುಸ್ಲಿಮರ ಮನೆಗಳಲ್ಲೀಗ ಸಂಭ್ರಮ ಮನೆಮಾಡಿದೆ. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ನೆಲೆಸಿರುವ ಬಡಾವಣೆಗಳು, ಮಾರುಕಟ್ಟೆ ಪ್ರದೇಶ ಮತ್ತು ಮಸೀದಿಗಳು ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿದ್ದು, ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಇಸ್ಲಾಂ ಧರ್ಮದ ಐದು ಕಡ್ಡಾಯಗಳಲ್ಲಿ ಉಪವಾಸ ವ್ರತವೂ(ರೋಜಾ) ಒಂದು. ಮುಸ್ಲಿಮರು ಕಳೆದ 21  ದಿನಗಳಿಂದ ತಪ್ಪದೆ ರೋಜಾ ಮಾಡುತ್ತಿದ್ದಾರೆ. ನಿತ್ಯ ನಸುಕಿನ ಜಾವ ಎದ್ದು ‘ಸಹರಿ’ ಮಾಡುವ ಅವರು, 13 ತಾಸಿಗಿಂತ ಹೆಚ್ಚು ಹೊತ್ತು ಹನಿ ನೀರನ್ನೂ ಕುಡಿಯದೇ ಉಪವಾಸ ಆಚರಿಸುತ್ತಿದ್ದಾರೆ.

ಇದರೊಂದಿಗೆ ಮುಂಜಾವಿನಿಂದ ರಾತ್ರಿಯವರೆಗೆ ಐದು ಬಾರಿ ಪ್ರಾರ್ಥನೆ(ಫಜರ್‌, ಜೋಹರ್‌, ಅಸರ್‌, ಮಗರೀಬ್‌ ಮತ್ತು ಇಶಾ) ಸಲ್ಲಿಸುತ್ತಿದ್ದಾರೆ. ‍‍‍‍ಪುರುಷರು ಮಸೀದಿಗಳಿಗೆ ತೆರಳಿ ಪ್ರಾರ್ಥಿಸಿದರೆ, ಮಹಿಳೆಯರು ಮನೆಯಲ್ಲೇ ಪ್ರಾರ್ಥಿಸಿ ಅಲ್ಲಾಹುವಿನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಅಲ್ಲದೇ, ಪ್ರತಿದಿನ ರಾತ್ರಿ ರಂಜಾನ್‌ ಮಾಸದಲ್ಲಷ್ಟೇ ಮಾಡುವ ‘ತರಾವೀಹ್‌’ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಪವಿತ್ರ ಗ್ರಂಥ ‘ಕುರ್‌ಆನ್‌’ ಪಠಿಸುವ ಜತೆಗೆ, ಅಲ್ಲಾಹುವಿನ ಸ್ಮರಣೆಯಲ್ಲಿ ತೊಡಗಿದ್ದಾರೆ.

ADVERTISEMENT
ನಮ್ಮಲ್ಲಿ ಜಾತಿ ಭೇದವಿಲ್ಲ. ಪ್ರತಿ ವರ್ಷದಂತೆ ಈ ಸಲವೂ ಮಾರ್ಚ್‌ 25ರಂದು ರಾಮತೀರ್ಥ ನಗರದಲ್ಲಿ ಇಫ್ತಾರ್‌ ಕೂಟ ಆಯೋಜಿಸಿದ್ದೇನೆ
ಸುರೇಶ ಯಾದವ ಅಧ್ಯಕ್ಷ ಸುರೇಶ ಯಾದವ ಫೌಂಡೇಷನ್‌
ಭಾವೈಕ್ಯ ಸಾರುತ್ತಿರುವ ಇಫ್ತಾರ್‌ ಕೂಟಗಳು
ಬೆಳಗಾವಿ ನಗರ ಮಾತ್ರವಲ್ಲ; ಜಿಲ್ಲೆಯ ವಿವಿಧ ಪಟ್ಟಣಗಳು ಹಳ್ಳಿಗಳ ಸಾರ್ವಜನಿಕ ಸ್ಥಳಗಳು ಮತ್ತು ಮಸೀದಿಗಳಲ್ಲಿ ನಿತ್ಯ ಸಂಜೆ ಸಾರ್ವಜನಿಕರು ಮತ್ತು ಸಂಘ–ಸಂಸ್ಥೆಗಳಿಂದ ಇಫ್ತಾರ್‌ ಕೂಟ ನಡೆಯುತ್ತಿವೆ. ಹಗಲಿಡೀ ಉಪವಾಸ ವ್ರತ ಕೈಗೊಂಡವರಿಗೆ ಫಲಾಹಾರ ಸಸ್ಯಾಹಾರ ಮತ್ತು ಮಾಂಸಾಹಾರ ವ್ಯವಸ್ಥೆ ಮಾಡಲಾಗುತ್ತಿದೆ. ಮುಸ್ಲಿಮರಷ್ಟೇ ಅಲ್ಲ; ಹಿಂದೂಗಳೂ ಇಫ್ತಾರ್ ಕೂಟಗಳಲ್ಲಿ ಭಾಗಿಯಾಗಿ ಭಾವೈಕ್ಯ ಮೆರೆಯುತ್ತಿದ್ದಾರೆ.
ಜಾತ್ಯತೀತ ನೆರವು
‘ಆರ್ಥಿಕ ಸಬಲರು ಸಂಕಷ್ಟದಲ್ಲಿ ಇದ್ದವರಿಗೆ ದಾನ ಮಾಡುವುದು(ಜಕಾತ್‌ ನೀಡುವುದು) ಕಡ್ಡಾಯ. ಎಲ್ಲರಿಗೂ ಹಬ್ಬದ ಆಚರಣೆ ಮತ್ತು ಜೀವನ ನಿರ್ವಹಣೆ ಸುಲಭವಾಗಲಿ ಎಂಬುದು ಇದರ ಉದ್ದೇಶ. ಹಾಗಾಗಿ ನನ್ನ ಉಳಿತಾಯದಲ್ಲಿ ಶೇ 2.5ರಷ್ಟು ಭಾಗವನ್ನು ಬಡವರಿಗೆ ಸಹಾಯಹಸ್ತ ಚಾಚಲು ಬಳಸುತ್ತೇನೆ. ಸಂಕಷ್ಟದಲ್ಲಿ ಇರುವ ಸರ್ವ ಧರ್ಮದವರಿಗೂ ಜಾತ್ಯತೀತವಾಗಿ ಸಹಾಯ ಮಾಡುತ್ತೇನೆ’ ಎನ್ನುತ್ತಾರೆ ಬೈಲಹೊಂಗಲದ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಐಟಿಐನ ನಿವೃತ್ತ ಪ್ರಾಚಾರ್ಯ ರಫಿಕ್‌ಅಹ್ಮದ್‌ ಅರಭಾವಿ.
ವ್ಯಕ್ತಿತ್ವ ಶುದ್ಧಗೊಳಿಸುವ ಮಾಸ
‘ರೋಜಾ ಎಂದರೆ ಹಸಿವಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ಪಂಚೇಂದ್ರೀಯಗಳ ಉಪವಾಸ. ಈ ತಿಂಗಳು ನಮಗೆ ಬಡವರ ಸಂಕಷ್ಟಗಳನ್ನು ತಿಳಿಸುತ್ತದೆ. ನಮ್ಮ ವ್ಯಕ್ತಿತ್ವವನ್ನೇ ಶುದ್ಧಗೊಳಿಸುತ್ತದೆ. ಹಾಗಾಗಿ ಮುಸ್ಲಿಮರು ಶ್ರದ್ಧೆಯಿಂದ ಧಾರ್ಮಿಕ ಆಚರಣೆ ಕೈಗೊಳ್ಳುತ್ತಾರೆ. ಅಲ್ಲಾಹುವಿನ ನಾಮಸ್ಮರಣೆಗೆ ಹೆಚ್ಚಿನ ಸಮಯ ಮೀಸಲಿಡುತ್ತಾರೆ’ ಎಂದು ಇಸ್ಲಾಂ ಧರ್ಮಗುರು ಮುಫ್ತಿ ಮಂಝೂರ್‌ ಅಹ್ಮದ್‌ ರಿಝ್ವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.