ರಾಮದುರ್ಗದ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮೀ ಜಗದೀಶ ಕಡಕೋಳ, ಉಪಾಧ್ಯಕ್ಷರಾದ ಸರಿತಾ ಗೋವಿಂದ ಧೂತ ಅವರೊಂದಿಗೆ ಸದಸ್ಯರು ಗೆಲುವಿನ ನಗೆ ಬೀರಿದರು
–ಪ್ರಜಾವಾಣಿ ಚಿತ್ರ
ರಾಮದುರ್ಗ: ‘ಆಪರೇಷನ್ ಹಸ್ತ’ದ ಕಾರಣ ತೀವ್ರ ಕುತೂಹಲ ಕೆರಳಿಸಿದ್ದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಸುಟ್ಟುಕೊಂಡಿದೆ. ಪ್ರತಿ ತಂತ್ರ ಹೆಣೆದ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಮತ್ತೊಮ್ಮೆ ಪುರಸಭೆ ಚುಕ್ಕಾಣಿ ಉಳಿಸಿಕೊಂಡಿದೆ.
ಸೋಮವಾರ ನಡೆದ, ಪುರಸಭೆಯ ಕೊನೆಯ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಲಕ್ಷ್ಮೀ ಜಗದೀಶ ಕಡಕೋಳ, ಉಪಾಧ್ಯಕ್ಷರಾಗಿ ಸರಿತಾ ಗೋವಿಂದ ಧೂತ ಅವಿರೋಧವಾಗಿ ಆಯ್ಕೆಯಾದರು.
27 ಸದಸ್ಯರನ್ನು ಹೊಂದಿದ್ದ ರಾಮದುರ್ಗ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಶಂಕರ ರೇವಣಸಿದ್ದಪ್ಪ ಸುಳಿಭಾವಿ ಮತ್ತು ಬಿಜೆಪಿಯ ಲಕ್ಷ್ಮೀ ಜಗದೀಶ ಕಡಕೋಳ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಸರಿತಾ ಗೋವಿಂದ ಧೂತ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಕೊನೆಯ ಕ್ಷಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‍ನ ಶಂಕರ ರೇವಣಸಿದ್ದಪ್ಪ ಸುಳಿಭಾವಿ ನಾಮಪತ್ರ ವಾಪಸ್ ಪಡೆದಿದ್ದರಿಂದ ಅಧ್ಯಕ್ಷರಾಗಿ ಲಕ್ಷ್ಮೀ ಜಗದೀಶ ಕಡಕೋಳ ಮತ್ತು ಉಪಾಧ್ಯಕ್ಷರಾಗಿ ಸರಿತಾ ಗೋವಿಂದ ಧೂತ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿದ್ದ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಘೋಷಣೆ ಮಾಡಿದರು.
ಚುನಾವಣೆ ಸಮಯಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಂಕರ ಸೂಳಭಾವಿ ಮತ್ತು ಸೂಚಕರನ್ನು ಹೊರತು ಮಿಕ್ಕವರು ಸಭೆಗೆ ಹಾಜರಾಗಲಿಲ್ಲ.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಸಹಾಯಕ ಚುನಾವಣಾಧಿಕಾರಿಯಾಗಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಕೆ. ಗುಡದಾರಿ ಕಾರ್ಯನಿರ್ವಹಿಸಿದರು.
ವಿಫಲವಾದ ಅಪಹರಣ: ಬಿಜೆಪಿ 16, ಕಾಂಗ್ರೆಸ್ 10, ಒಬ್ಬ ಪಕ್ಷೇತರ ಸದಸ್ಯ ಇದ್ದಾರೆ. ಬಿಜೆಪಿಯಲ್ಲಿ ಗುಂಪುಗಾರಿಕೆಯ ಲಾಭ ಪಡೆಯಬೇಕು ಎಂದು ಕಾಂಗ್ರೆಸ್ ನಾಯಕರು ಬಿಜೆಪಿಯ 5 ಮತ್ತು ಒಬ್ಬ ಪಕ್ಷೇತರ ಸದಸ್ಯರನ್ನು ಸೆಳೆಯಲು ತಂತ್ರ ಹೂಡಿದ್ದರು. ಆಪರೇಷನ್ ಹಸ್ತಕ್ಕಾಗಿ ಆರೂ ಸದಸ್ಯರನ್ನು ಅಪಹರಣ ಮಾಡಿ ಅಧಿಕಾರ ಹಿಡಿಯುವ ಉಮೇದಿನಲ್ಲಿದ್ದರು.
ಎಚ್ಚೆತ್ತುಕೊಂಡ ಬಿಜೆಪಿಯ ನಾಯಕರು ಅಪಹರಣಗೊಂಡ ಸದಸ್ಯರ ಅನ್ವೇಷಣೆ ನಡೆಸಿ ಸಿನಿಮೀಯ ರೀತಿಯಲ್ಲಿ ಪತ್ತೆ ಮಾಡಿ, ತನ್ನ ವಶಕ್ಕೆ ಪಡೆದುಕೊಂಡಿತು. ಹಿಂದುಳಿದ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಪದ್ಮಾವತಿ ಸಿದ್ಲಿಂಗಪ್ಪನವರ ನಾಮಪತ್ರ ಸಲ್ಲಿಸುವಲ್ಲಿಯೇ ವಿಫಲವಾದರು.
ಶಾಸಕ ಅಶೋಕ ಪಟ್ಟಣ ಮಾರ್ಗದರ್ಶನ ಇಲ್ಲದೆಯೇ ‘ಆಪರೇಶನ್ ಹಸ್ತ’ ಮಾಡಿದ್ದ ಸ್ಥಳೀಯ ರಾಜಕಾರಣಿಗಳು ಬಹುತೇಕರ ಕಡೆಯಿಂದ ಛೀ ಮಾರಿ ಹಾಕಿಸಿಕೊಂಡಿದ್ದಾರೆ ಎಂಬುದು ಪಕ್ಷದ ಒಳಗಿನ ಮಾತು.
ಕಾಂಗ್ರೆಸ್ ಪಕ್ಷ ಕುದುರೆ ವ್ಯಾಪಾರ ನಡೆಸಿ ಅಪಹರಣ ಮಾಡಿತ್ತು. ಆದರೆ ನಿಷ್ಠಾವಂತ ಸದಸ್ಯರು ಆಮಿಷಕ್ಕೆ ಒಳಗಾಗದೇ ಬಿಜೆಪಿಗೆ ಅಧಿಕಾರ ತಂದರು–ಮಲ್ಲಣ್ಣ ಯಾದವಾಡ, ಬಿಜೆಪಿ ಮುಖಂಡ
ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಇರಲಿಲ್ಲ. ಬಿಜೆಪಿಯ ಅತೃಪ್ತ ಸದಸ್ಯರು ಬೆಂಬಲಿಸುವುದಾಗಿ ಹೇಳಿದ್ದರು. ಕೊನೆ ಕ್ಷಣದಲ್ಲಿ ಕೈಕೊಟ್ಟರು–ಸುರೇಶ ಪತ್ತೇಪೂರ, ಕೆಪಿಸಿಸಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.