ADVERTISEMENT

ರಾಮದುರ್ಗ: ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 3:17 IST
Last Updated 15 ಜುಲೈ 2025, 3:17 IST
ರಾಮದುರ್ಗದ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿದರು
ರಾಮದುರ್ಗದ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿದರು   

ರಾಮದುರ್ಗ: ತಾಲ್ಲೂಕಿನಲ್ಲಿ ಜನಪ್ರತಿನಿಧಿಗಳ ಮಾತಿಗೆ ಮಣ್ಣನೆ ನೀಡದೆ ತಮಗೆ ಬೇಕಾದವರನ್ನು ಆಡಳಿತ ಕಚೇರಿಯಲ್ಲಿ ಇಟ್ಟುಕೊಂಡು ಅಂಗವೈಕಲ್ಯ ಇರುವ ಸಿಬ್ಬಂದಿಯನ್ನು ಅಲ್ಲಲ್ಲಿ ಸುತ್ತಾಡಲು ಕಳಿಸುತ್ತಿದ್ದಾರೆ. ಇಂಥ ಅಧಿಕಾರಿಗಳ ಅಗತ್ಯ ರಾಮದುರ್ಗ ಕ್ಷೇತ್ರಕ್ಕೆ ಬೇಡವಾಗಿದೆ ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಸಿಡಿಮಿಡಿಗೊಂಡರು.

ತಾಲ್ಲೂಕು ಪಂಚಾಯಿತಿ ಸಭಾಸಭವನದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಏರುಧನಿಯಲ್ಲಿ ಮಾತನಾಡಿದರು.

ಕಳೆದ ಹಲವಾರು ವರ್ಷಗಳಿಂದ ಕಚೇರಿಯಲ್ಲಿ ಠಿಕಾಣಿ ಹೂಡಿರುವ ನೌಕರರನ್ನು ಬೇರೆ ಕೆಲಸಕ್ಕೆ ನೇಮಕ ಮಾಡಲು ಸೂಚನೆ ನೀಡಿದ್ೂರ ಶಾಸಕರ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಈ ವಿಷಯದಲ್ಲಿ ಕಾಲಹರಣ ಮಾಡುತ್ತ ಸುಳ್ಳು ಹೇಳುತ್ತಿರುವುದಕ್ಕೆ ಸಿಡಿಪಿಓ ಶಂಕರ ಕುಂಬಾರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ADVERTISEMENT

ಸಭೆಯಲ್ಲಿದ್ದ ನೋಡಲ್ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಂ.ಎನ್. ಚೇತನಕುಮಾರ ಮಧ್ಯ ಪ್ರವೇಶಿಸಿ, ಸರಿ ಪಡಿಸುವ ಭರವಸೆ ನೀಡಿದರು.

ಕಾರ್ಮಿಕ ಇಲಾಖೆಯ ಅಧಿಕಾರಿ ನಾಗರಾಜ ಸರಿಯಾಗಿ ಕಚೇರಿಯಲ್ಲಿ ಇರುವುದಿಲ್ಲ. ಶಾಸಕರು ಖುದ್ದಾಗಿ ಕಚೇರಿಗೆ ಹೋದಾಗಲೂ ಕಚೇರಿಯಲ್ಲಿ ಇರುವುದಿಲ್ಲ. ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಅವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಕಾರ್ಮಿಕರಿಗೆ ನ್ಯಾಯ ಸಿಗುತ್ತಿಲ್ಲ. ಕಾರ್ಮಿಕರು ಕಾರ್ಡುಗಳನ್ನು ಕೇಳಲು ಬಂದರೆ ಅವರ ಏಜೆಂಟರ್‌ ಮೂಲಕ ಲಂಚ ಪಡೆಯುತ್ತಾರೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ಕಳೆದ ಹಲವಾರು ದಶಕಗಳಿಂದ ಗ್ರಾಮದ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿದ ಗ್ರಾಮಸ್ಥರ ಮನೆಗಳನ್ನು ತೆರವುಗೊಳಿಸುವುದಕ್ಕೆ ಅರಣ್ಯಾಧಿಕಾರಿ ಭಾಗ್ಯಶ್ರೀ ಮಸಳಿ ದರ್ಪದಿಂದ ಮುಂದಾಗಿದ್ದಾರೆ. ಹಳೆ ಮನೆಗಳನ್ನು ತೆರವು ಮಾಡವಂತಿಲ್ಲ. ಹೊಸ ಮನೆಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು.

ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ನೀರು ಪೂರೈಕೆ ಮಾಡುವ ಜೆಜೆಎಂ ಕಾಮಗಾರಿ ಆರಂಭವಾಗಿ ಹಲವು ವರ್ಷ ಕಳೆದರೂ ಕಾಮಗಾರಿ ಇನ್ನು ಮುಗಿದಿಲ್ಲ. ಕಾಮಗಾರಿ ಮುಗಿದಲ್ಲಿ ರಸ್ತೆಗಳನ್ನು ಗುತ್ತಿಗೆದಾರರಿಂದ ರಸ್ತೆ ಮಾಡಿಸದಿರುವುದಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಎಂಜಿನಿಯರ್‌ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ಮುದೇನೂರ ಗ್ರಾಮದಲ್ಲಿ ಮೇಲ್ಮಟ್ಟದ ಜಲಸಂಗ್ರಾಲಯ ಪಾಚಿಗಟ್ಟಿದ್ದು ಜನ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ತ್ವರಿತವಾಗಿ ಟ್ಯಾಂಕ್‌ ಸ್ವಚ್ಚಗೊಳಿಸಿ ಶುದ್ಧ ನೀರು ಪೂರೈಸಬೇಕು. ಅದೇ ಗ್ರಾಮದಲ್ಲಿ ಒಂದು ಕೊಳವೆ ಬಾವಿ ಕೊರೆಯಿಸಿ ನೀರಿನ ಸಮಸ್ಯೆ ನೀಗಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಎಂ.ಎನ್.ಚೇತನಕುಮಾರ, ತಾಲ್ಲೂಕು ಪಂಚಾಯಿತಿ ಇಓ ಬಸವರಾಜ ಐನಾಪೂರ, ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಇದ್ದರು.

ಕ್ರಿಯಾ ಯೋಜನೆಗೆ ಸೂಚನೆ

ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹50 ಕೋಟಿ ಅನುದಾನ ಲಭ್ಯವಾಗಲಿದ್ದು ಇದರಲ್ಲಿ ತಾಲ್ಲೂಕಿನ ಮುಖ್ಯರಸ್ತೆಗಳ ಅಭಿವೃದ್ಧಿಗೆ ₹37 ಕೋಟಿ ಮತ್ತು ಗ್ರಾಮೀಣ ಮತ್ತು ರೈತರ ಜಮೀನುಗಳಿಗೆ ತೆರಳುವ ರಸ್ತೆಗೆ ₹12.50 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧ ಪಡಿಸಲು ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.