ರಾಮದುರ್ಗ: ತಾಲ್ಲೂಕಿನ ಆಡಳಿತ ಕೇಂದ್ರವಾದ ಇಲ್ಲಿನ ಮಿನಿ ವಿಧಾನಸೌಧಕ್ಕೆ ನಿತ್ಯ ಬರುವವರು ಮೂತ್ರಾಲಯ ವ್ಯವಸ್ಥೆ ಇಲ್ಲದ್ದರಿಂದ ಪರದಾಡುವಂತಾಗಿದೆ. ಮಧುಮೇಹದಿಂದ ಬಳಲುವವರು ಜಲಬಾಧೆ ತೀರಿಸಿಕೊಳ್ಳಲು ಸಂಕಟ ಪಡುತ್ತಿದ್ದಾರೆ.
ಇಲ್ಲಿ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಮೂತ್ರ ವಿಸರ್ಜನೆಗಾಗಿ ಕಚೇರಿ ಬಳಿ ಇರುವ ಮರಗಳು ಅಥವಾ ಗೋಡೆಗಳನ್ನೇ ಆಶ್ರಯಿಸಿದ್ದಾರೆ. ಮಹಿಳಾ ನೌಕರರೂ ಇದರಿಂದ ಹೊರತಾಗಿಲ್ಲ.
20 ವರ್ಷಗಳ ಹಿಂದೆ ರಾಜ್ಯ ಸರ್ಕಾರ ತಾಲ್ಲೂಕಿಗೊಂದು ಮಿನಿ ವಿಧಾನಸೌಧ ನಿರ್ಮಿಸಿದೆ. ಈ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಎಸ್.ಎಂ.ಜಾಮದಾರ ₹4.5 ಕೋಟಿ ವೆಚ್ಚದಲ್ಲಿ ರಾಮದುರ್ಗದಲ್ಲಿ ಮಿನಿ ವಿಧಾನಸೌಧ ನಿರ್ಮಿಸಿದ್ದರು. ಇದು ಶೌಚಗೃಹ ಸೇರಿದಂತೆ ಅಗತ್ಯ ಮೂಲಸೌಕರ್ಯ ಹೊಂದಿತ್ತು.
ಆದರೆ, ಸ್ವಚ್ಛಗೊಳಿಸುವವರು ಇಲ್ಲ ಎಂಬ ನೆಪಹೇಳಿ ಶೌಚಗೃಹಕ್ಕೆ ಬೀಗ ಜಡಿಯಲಾಗಿದೆ. ಇದರಿಂದಾಗಿ ಸೌಧಕ್ಕೆ ಬರುವವರು ಶೌಚಕ್ಕಾಗಿ ಮತ್ತು ಮೂತ್ರ ವಿಸರ್ಜನೆಗಾಗಿ ಪರದಾಡುತ್ತಿದ್ದಾರೆ. ‘ಎ’ ದರ್ಜೆ ಅಧಿಕಾರಿಗಳಷ್ಟೇ ತಮ್ಮ ಕೊಠಡಿಗಳಲ್ಲಿ ಪ್ರತ್ಯೇಕವಾಗಿರುವ ಶೌಚಗೃಹ ಬಳಸುತ್ತಾರೆ.
ಧೂಳಿನಿಂದ ಆವರಿಸಿದ ಸೌಧ:
ಸಮರ್ಪಕ ನಿರ್ವಹಣೆ ಕೊರತೆಯಿಂದ ಬಳಲುತ್ತಿರುವ ಸೌಧ ಧೂಳಿನಿಂದ ಆವರಿಸಿದೆ. ತಂಬಾಕು ಉತ್ಪನ್ನಗಳನ್ನು ಜಗಿದು, ಕಟ್ಟಡದ ಮೇಲೆ ಉಗಿದಿರುವ ಕಲೆಗಳು ಎಲ್ಲೆಂದರಲ್ಲಿ ಕಾಣಸಿಗುತ್ತಿವೆ. ಕೆಲವೇ ಕಾರ್ಮಿಕರನ್ನು ನೇಮಿಸಿಕೊಂಡ ತಾಲ್ಲೂಕು ಆಡಳಿತವು ಸೌಧದ ಪ್ರಾಂಗಣ ಮತ್ತು ಬಯಲು ಪ್ರದೇಶ ಸ್ವಚ್ಛಗೊಳಿಸುತ್ತಿದೆ. ಆದರೆ, ಶೌಚಗೃಹದ ನಿರ್ವಹಣೆ ಮರೆತಿದೆ.
‘ಸೌಧದಲ್ಲಿ ಸ್ವಚ್ಛತೆ ಕಾಪಾಡಲು ತಹಶೀಲ್ದಾರ್ ಕ್ರಮ ವಹಿಸಬೇಕು. ಮುಖ್ಯವಾಗಿ ಮೂತ್ರ ವಿಸರ್ಜನೆಗೆ ವ್ಯವಸ್ಥೆ ಮಾಡಬೇಕು’ ಎಂಬುದು ಸಾರ್ವಜನಿಕರ ಆಗ್ರಹ.
‘ಜಾಗದ ಕೊರತೆ’
‘ರಾಮದುರ್ಗ ಪಟ್ಟಣದಲ್ಲಿ ಹಲವು ಕಡೆ ಮೂತ್ರಾಲಯಗಳ ನಿರ್ಮಾಣಕ್ಕೆ ಮುಂದಾದಾಗ ಜನರಿಂದ ಆಕ್ಷೇಪ ವ್ಯಕ್ತವಾಯಿತು. ಪಟ್ಟಣದಲ್ಲಿ ಮೂತ್ರಾಲಯಗಳನ್ನು ನಿರ್ಮಿಸಲು ಜಾಗದ ಕೊರತೆ ಹೆಚ್ಚಿದೆ. ಜಾಗ ಸಿಕ್ಕರೆ ಹೈಟೆಕ್ ಮೂತ್ರಾಲಯ ನಿರ್ಮಿಸಲಾಗುವುದು. ಇಲ್ಲದಿದ್ದರೆ ಪ್ಲಾಸ್ಟಿಕ್ ಮೂತ್ರಾಲಯಗಳನ್ನೇ ಇರಿಸಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಮಿನಿ ವಿಧಾನಸೌಧ ಪಕ್ಕದಲ್ಲಿ ನಾಲ್ಕು ಮೂತ್ರಾಲಯಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯವರು ಅಂದಾಜು ಪತ್ರಿಕೆ ತಯಾರಿಸಿಕೊಂಡು ಹೋಗಿದ್ದಾರೆ. ಶೀಘ್ರ ಅವುಗಳನ್ನು ನಿರ್ಮಿಸಲಾಗುವುದು. ಸೌಧದೊಳಗಿನ ಶೌಚಗೃಹ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದುಸಂಜಯ, ಖಾತೇದಾರ ತಹಶೀಲ್ದಾರ್ ಗ್ರೇಡ್–2
ದೂರದ ಊರುಗಳಿಂದ ಮಿನಿ ವಿಧಾನಸೌಧಕ್ಕೆ ಬರುವವರು ಶೌಚಗೃಹ ಇಲ್ಲದೆ ಪರದಾಡುತ್ತಿದ್ದಾರೆ. ಜಲಬಾಧೆ ನಿವಾರಣೆಗೆ ಬಯಲನ್ನೇ ಆಶ್ರಯಿಸಿದ್ದಾರೆಮಂಜುನಾಥ ತೊರಗಲ್, ವ್ಯಾಪಾರಿ, ರಾಮದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.