ADVERTISEMENT

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ: ಫಲಿತಾಂಶ ಕಾಯುತ್ತಿದ್ದವರಿಗೆ ಮತ್ತೆ ಪರೀಕ್ಷೆ

ಇಮಾಮ್‌ಹುಸೇನ್‌ ಗೂಡುನವರ
Published 31 ಮೇ 2025, 0:45 IST
Last Updated 31 ಮೇ 2025, 0:45 IST
   

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು) ವ್ಯಾಪ್ತಿಯಲ್ಲಿ ನಡೆದ ಬಿ.ಕಾಂ 6ನೇ ಸೆಮಿಸ್ಟರ್‌ನ ‘ಇನ್‌ಕಮ್‌ ಟ್ಯಾಕ್ಸ್‌ ಲಾ ಆ್ಯಂಡ್‌ ಪ್ರ್ಯಾಕ್ಟೀಸ್‌–2’ ವಿಷಯದ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಈಗ ಮರುಪರೀಕ್ಷೆ ಎದುರಾಗಿದೆ.

ಪರೀಕ್ಷೆಯಲ್ಲಿ ಕೇಳಿದ್ದ 10 ಅಂಕಗಳ ಪ್ರಶ್ನೆಯೊಂದು ಅಪೂರ್ಣವಾಗಿದೆ. ಹೀಗಾಗಿ ಈ ವಿಷಯದ ಮರುಪರೀಕ್ಷೆ ನಡೆಸಲು ನಿರ್ಧರಿಸಿ ಮೌಲ್ಯಮಾಪನ ಕುಲಸಚಿವರು ಮೇ 29ರಂದು ಸುತ್ತೋಲೆ ಹೊರಡಿಸಿದ್ದು ವಿದ್ಯಾರ್ಥಿಗಳಿಗೆ ಸಂಕಷ್ಟ ತಂದಿದೆ.

ಮೇ 20ರಂದು ‘ಇನ್‌ಕಮ್‌ ಟ್ಯಾಕ್ಸ್‌ ಲಾ ಆ್ಯಂಡ್‌ ಪ್ರ್ಯಾಕ್ಟೀಸ್‌–2’ ವಿಷಯದ ಪರೀಕ್ಷೆ ನಡೆದಿತ್ತು. ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ 11,200 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಮೇ 29ರಂದು ಬಿ.ಕಾಂ 6ನೇ ಸೆಮಿಸ್ಟರ್‌ನ ಎಲ್ಲ ವಿಷಯಗಳ ಪರೀಕ್ಷೆ ಮುಗಿದಿದ್ದರಿಂದ ನಿರಾಳರಾಗಿದ್ದರು. ಕೆಲವರು ಮುಂದಿನ ಓದಿಗೆ ತಯಾರಿ ನಡೆಸಿದ್ದರು.

ADVERTISEMENT

‘ಮೊದಲೇ ಆರ್ಥಿಕ ಸಮಸ್ಯೆ ಮಧ್ಯೆಯೂ ಓದುತ್ತಿದ್ದೇವೆ. ಇನ್ನೇನು ಪದವಿ ಓದು ಮುಗಿಯಿತೆಂದು ನಿಶ್ಚಿಂತೆಯಿಂದ ಇದ್ದೆವು. ತಪ್ಪಾಗಿದ್ದ ಪ್ರಶ್ನೆಗೆ ಕೃಪಾಂಕ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಈಗ ಮರುಪರೀಕ್ಷೆಗೆ ನಿರ್ಧರಿಸಿದ್ದು ಸರಿಯಲ್ಲ. ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಎದುರಿಸುವಂತಾಗಿದೆ’ ಎಂದು ಜಿಲ್ಲೆಯ ರಾಮದುರ್ಗದ ಕಾಲೇಜಿನ ವಿದ್ಯಾರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ನಾವು 60 ಅಂಕಗಳ ಪರೀಕ್ಷೆ ನಡೆಸಿದ್ದೆವು. ಈ ಪ್ರಶ್ನೆಪತ್ರಿಕೆಯಲ್ಲಿ ಬಳಸಲಾದ 10 ಅಂಕಗಳ ಪ್ರಶ್ನೆಯೊಂದು ಅಪೂರ್ಣವಾಗಿ ಮುದ್ರಣವಾಗಿತ್ತು. ನಮಗೆ 10 (ಒಟ್ಟಾರೆ ಅಂಕಗಳಲ್ಲಿ ಶೇ 16ಕ್ಕಿಂತ ಹೆಚ್ಚು) ಕೃಪಾಂಕ ಕೊಡಲು ಬರುವುದಿಲ್ಲ. ಹೀಗಾಗಿ ಕುಲಪತಿಗಳ ನಿರ್ದೇಶನದ ಅನ್ವಯ ಮರುಪರೀಕ್ಷೆಗೆ ತೀರ್ಮಾನಿಸಿದ್ದೇವೆ. ಈ ಸಂಬಂಧ ಎಲ್ಲ ಕಾಲೇಜುಗಳಿಗೆ ಮಾಹಿತಿ ರವಾನಿಸಿದ್ದೇವೆ’ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಂ ‘‍ಪ್ರಜಾವಾಣಿ’ಗೆ ತಿಳಿಸಿದರು.

ಡಾ.ರವೀಂದ್ರನಾಥ ಕದಂ
ಪ್ರಶ್ನೆಪತ್ರಿಕೆ ಸಿದ್ಧಪಡಿಸುವಲ್ಲಿ ಲೋಪ ಎಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಈ ಸಂಬಂಧ ಎಲ್ಲವನ್ನೂ ಪರಿಶೀಲಿಸಲಾಗುವುದು.
ಪ್ರೊ.ಸಿ.ಎಂ.ತ್ಯಾಗರಾಜ ಕುಲಪತಿ ಆರ್‌ಸಿಯು
ಈಗ ಹೊಸದಾಗಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಕೊಡುವಂತೆ ಪರೀಕ್ಷಾ ಮಂಡಳಿಯವರಿಗೆ ಸೂಚಿಸಿದ್ದೇವೆ. ಮರುಪರೀಕ್ಷೆ ದಿನಾಂಕ ಸದ್ಯದಲ್ಲೇ ತಿಳಿಸುತ್ತೇವೆ.
ಪ್ರೊ.ರವೀಂದ್ರನಾಥ ಕದಂ ಮೌಲ್ಯಮಾಪನ ಕುಲಸಚಿವ ಆರ್‌ಸಿಯು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.