ಬಂಧನ
ಬೆಳಗಾವಿ: ಜಿಲ್ಲೆಯ ತಾಲ್ಲೂಕು ಕೇಂದ್ರವೊಂದರ ಮಸೀದಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಘಟನೆ ಎರಡು ವರ್ಷಗಳ ಬಳಿಕ ಗೊತ್ತಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ತನಿಖೆ ನಡೆಸಿದ್ದಾರೆ.
‘ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ತುಫೇಲ್‌ಅಹ್ಮದ್ ದಾದಾಪೀರ್ ನಗರ್ಚಿ (22) ಆರೋಪಿ. ತಗಡಿನ ಶೆಡ್ ನಿರ್ಮಾಣದ ಕೆಲಸ ಮಾಡುವ ಆರೋಪಿ, ಆಗಾಗ ಮಸೀದಿಯಲ್ಲಿ ಧರ್ಮ ಬೋಧನೆ ಮಾಡುತ್ತಿದ್ದ. 2023ರ ಅಕ್ಟೋಬರ್ 5ರಂದು ಮಸೀದಿ ಪಕ್ಕದಲ್ಲಿನ ಮನೆ ಬಳಿ ಆಟವಾಡುತ್ತಿದ್ದ ಬಾಲಕಿಗೆ ಪುಸಲಾಯಿಸಿ, ಅತ್ಯಾಚಾರ ಎಸಗಿದ್ದ. ಇದು ಮಸೀದಿ ಒಳಗಿನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತೆಯಾಗಿದ್ದು ಹೇಗೆ?:
‘ಪುನೀತ್ ಕೆರೆಹಳ್ಳಿ ಎಂಬುವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಮಂಗಳವಾರ (ಆ.5) ಈ ವಿಷಯ ಹಂಚಿಕೊಂಡಿದ್ದರು. ಮಸೀದಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ದೂರು ಕೊಡದಂತೆ ಮಸೀದಿಯವರು ಬಾಲಕಿಯ ತಂದೆಗೆ ಬೆದರಿಕೆ ಹಾಕಿದ್ದಾರೆ. ಅವರಿಗೆ ನ್ಯಾಯ ಕೊಡಿಸುವವರು ಶೇರ್ ಮಾಡಿರಿ’ ಎಂದು ಬರೆದಿದ್ದರು. ಇದರೊಂದಿಗೆ ಅತ್ಯಾಚಾರದ ವಿಡಿಯೊ ತುಣುಕು, ಬಾಲಕಿಯ ತಂದೆ ಮಾತನಾಡಿದ ಆಡಿಯೊ ತುಣುಕು ಇತ್ತು.
ಜಿಲ್ಲಾ ಸಾಮಾಜಿಕ ಜಾಲತಾಣಗಳ ಮಾನಿಟರಿಂಗ್ ಕೋಶದವರು ಇದನ್ನೇ ಸಾಕ್ಷಿಯಾಗಿಸಿಕೊಂಡು ಕಾರ್ಯ
ಪ್ರವೃತ್ತರಾದರು. ಆಗ ಅತ್ಯಾಚಾರದ ವಿಷಯ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.
‘ಅತ್ಯಾಚಾರ ಎಸಗಿದ ದೃಶ್ಯಗಳು ಮಸೀದಿಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆದರೆ, ಕೆಲವರು ರಾಜಿ
ನಡೆಸಿ ಪ್ರಕರಣ ಮುಚ್ಚಿಹಾಕಿದ್ದರು.
ಬಾಲಕಿ ಪಾಲಕರೂ ದೂರು ಕೊಟ್ಟಿರಲಿಲ್ಲ. ಈಚೆಗೆ ಬಾಲಕಿಯ ತಂದೆ ಇನ್ನೊಬ್ಬರೊಂದಿಗೆ ಮೊಬೈಲ್‌ನಲ್ಲಿ ಈ ವಿಷಯ ಹೇಳಿಕೊಂಡಿದ್ದರು.
ಅದರ ಆಡಿಯೊ ತುಣುಕು ಹಾಗೂ ಸಿಸಿಟಿವಿ ತುಣುಕು ಸಂಗ್ರಹಿಸಿದ್ದ ಪುನೀತ್ ಕೆರೆಹಳ್ಳಿ ಮಂಗಳವಾರ ‘ಎಕ್ಸ್’ನಲ್ಲಿ ಅಪ್ಲೋಡ್ ಮಾಡಿದ್ದರು’ ಎಂದರು.
‘ಮುರಗೋಡ ಪೊಲೀಸ್ ಠಾಣೆಯ ಅಧಿಕಾರಿಗಳ ನೇತೃತ್ವದಲ್ಲಿ ಮೂರು ತಂಡ ರಚಿಸಿ, ಬುಧವಾರ ಆರೋಪಿಯನ್ನು ವಶಕ್ಕೆ ಪಡೆಲಾಯಿತು. ತಂದೆ–ತಾಯಿ ಜತೆಗೆ ಜಗಳವಾಡಿ, ಚಿಕ್ಕಮ್ಮನ ಮನೆಗೆ ಬಂದಿದ್ದ ಆರೋಪಿ ಈ ಕೃತ್ಯ ಎಸಗಿದ್ದಾನೆ’ ಎಂದರು.
‘ಇದರಲ್ಲಿ ಮಸೀದಿಯವರು ನೇರ ಆರೋಪಿಗಳಾಗಿಲ್ಲ. ಸಂಧಾನ
ಮಾಡಿ ಪ್ರಕರಣ ಮುಚ್ಚಲು |ಯತ್ನಿಸಿದವರನ್ನು ವಿಚಾರಣೆ ಮಾಡಲಾಗುತ್ತಿದೆ. 2024ರ ಜುಲೈ 1ಕ್ಕಿಂತ ಮುಂಚೆ ಆಗಿದ್ದರಿಂದ ಐಪಿಸಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.