
ರಟ್ಟೀಹಳ್ಳಿ ಪಟ್ಟಣದ ತರಳುಬಾಳು ಬಡಾವಣೆಯ 2ನೇ ಕ್ರಾಸ್‌ನಲ್ಲಿ ಕಲ್ಲುಕಡಿ ಹಾಕಿ ರಸ್ತೆ ನಿರ್ಮಿಸಿದ್ದು, ಸರಿಯಾಗಿ ರೋಲರ್ ಹಾಕದೆ ಹಾಗೇ ಬಿಡಲಾಗಿದೆ
ರಟ್ಟೀಹಳ್ಳಿ: ತಾಲ್ಲೂಕು ಕೇಂದ್ರ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮಾರ್ಪಟ್ಟು ಹಲವು ವರ್ಷಗಳು ಕಳೆದಿವೆ. ಆದರೆ ಇಲ್ಲಿನ ಜನತೆ ಮೂಲಸೌಲಭ್ಯ ಪಡೆಯುವಲ್ಲಿ ಯಶಸ್ವಿಯಾಗಿಲ್ಲ.
ಪಟ್ಟಣದ ತರಳುಬಾಳು ಬಡಾವಣೆಯಲ್ಲಿ ಈಗಾಗಲೇ 250ಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿದ್ದು, ಮೂಲಸೌಕರ್ಯಗಳಾದ ಕುಡಿಯುವ ನೀರು, ಪಕ್ಕಾರಸ್ತೆ, ಚರಂಡಿ ವ್ಯವಸ್ಥೆ, ಬೀದಿದೀಪಗಳ ವ್ಯವಸ್ಥೆಯಿಲ್ಲದೆ ಜನರು ಆಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ.
ತರಳುಬಾಳು ಬಡಾವಣೆಯ ಮೊದಲ ಕ್ರಾಸ್‌ನಲ್ಲಿ ಕಚ್ಚಾರಸ್ತೆಯಿದ್ದು, ಅತ್ಯಂತ ಕಿರಿದಾಗಿದೆ. ಚರಂಡಿ ವ್ಯವಸ್ಥೆಯಿಲ್ಲದೆ ಮನೆಯ ಪಕ್ಕದಲ್ಲಿಯೇ ಚರಂಡಿ ನೀರು ನಿಂತು ಗಬ್ಬು ನಾರುತ್ತಿದ್ದು, ವಿಪರೀತ ಸೊಳ್ಳೆಗಳ ತಾಣವಾಗಿ, ಇಲ್ಲಿನ ನಾಗರಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇರುವ ಕಚ್ಚಾರಸ್ತೆ ತಗ್ಗು– ದಿನ್ನೆಗಳಿಂದ ಕೂಡಿದ್ದು, ಸಂಚಾರ ಅವ್ಯವಸ್ಥೆಯಾಗಿದೆ.
ಮಳೆಗಾಲದಲ್ಲಿ ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಓಡಾಡುವುದು ದುಸ್ತರವಾಗಿದೆ. ಖಾಲಿ ನಿವೇಶನಗಳಲ್ಲಿ ವಿಪರೀತ ಗಿಡ, ಮುಳ್ಳುಗಳು ಎತ್ತರಕ್ಕೆ ಬೆಳೆದು ನಿಂತಿದ್ದು ವಿಷಜಂತುಗಳ ತಾಣವಾಗಿದೆ. ತರಳುಬಾಳು ಬಡಾವಣೆಯ ಎರಡನೇ ಕ್ರಾಸ್‌ನಲ್ಲಿ ಇಂಥದ್ದೇ ಸಮಸ್ಯೆಗಳಿದ್ದು, ರಸ್ತೆ ನಿರ್ಮಾಣವಾಗಿಲ್ಲ. ಬೀದಿದೀಪಗಳ ವ್ಯವಸ್ಥೆ ಸರಿಯಿಲ್ಲ ಎಂದು ಇಲ್ಲಿನ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
2ನೇ ಕ್ರಾಸ್ ಎ ಬ್ಲಾಕ್‌ನಲ್ಲಿಯೂ ಸಾಕಷ್ಟು ಮನೆಗಳು ನಿರ್ಮಾಣಗೊಂಡಿದ್ದು, ಇಲ್ಲಿನ ಜನತೆಗೆ ಪಟ್ಟಣ ಪಂಚಾಯಿತಿಯಿಂದ ಇದುವರೆಗೂ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿದ್ದಾರೆ. ರಸ್ತೆಗಳು ಹಾಳಾಗಿದೆ. ಇತ್ತೀಚೆಗೆ ರಸ್ತೆ ನಿರ್ಮಾಣ ಆರಂಭಿಸಿದ್ದರೂ ಪೂರ್ಣಗೊಳಿಸಿಲ್ಲ. ಇದರಿಂದ ದೊಡ್ಡ, ದೊಡ್ಡ ಕಲ್ಲುಗಳ ಮೇಲೆಯೇ ಜನರು ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಅಲ್ಲದೇ ದ್ವಿಚಕ್ರವಾಹನ ಸವಾರರು ಪದೇ ಪದೇ ಗಾಡಿಗಳು ಪಂಚರ್ ಆಗುತ್ತವೆ ಎಂದು ದೂರುತ್ತಾರೆ.
ಇಲ್ಲಿಯೂ ಚರಂಡಿ ವ್ಯವಸ್ಥೆಯಿಲ್ಲದೆ ಮನೆಯ ಪಕ್ಕದಲ್ಲಿಯೇ ಅಥವಾ ಮನೆಯ ಎದುರಿಗೆ ಚರಂಡಿ ನೀರು ಶೇಖರಣೆಗೊಂಡು, ಅನೈರ್ಮಲ್ಯದಿಂದ ಕೂಡಿದೆ. ಪ್ರತಿಬಾರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ವಿನಂತಿಸಿದರೂ ಪ್ರಯೋಜನವಾಗುತ್ತಿಲ್ಲ ಎನ್ನುವುದು ಈ ಬಡಾವಣೆಯ ಜನತೆ ಕೂಗು.
‘ತರಳುಬಾಳು ಬಡಾವಣೆಯ 2ನೇ ಕ್ರಾಸ್‌ನಲ್ಲಿ ಇತ್ತೀಚಿಗೆ ಕಚ್ಚಾರಸ್ತೆ ನಿರ್ಮಿಸಿದ್ದು, ದೊಡ್ಡ, ದೊಡ್ಡ ಕಲ್ಲುಗಳು ಹಾಗೇ ಇವೆ. ಗುತ್ತಿಗೆದಾರರು ಸಂಪೂರ್ಣ ಕಳಪೆ ಕಾಮಗಾರಿ ಮಾಡಿದ್ದಾರೆ. ಚರಂಡಿ ನೀರು ಗುಂಡಿಗಳಲ್ಲಿ ನಿಂತು ಈ ಪ್ರದೇಶ ಗಬ್ಬು ನಾರುತ್ತದೆ. ಸೊಳ‍್ಳೆಗಳ ಕಾಟ ವಿಪರೀತವಾಗಿದೆ. ಕುಡಿಯುವ ನೀರಿನ ಸೌಲಭ್ಯವಿಲ್ಲದಾಗಿದೆ’ ಎನ್ನುತ್ತಾರೆ ನಿವೃತ್ತ ಪಿ.ಎಸ್.ಐ. ಎ.ಆರ್. ಮಣಕೂರ.
‘ತರಳುಬಾಳು ಬಡಾವಣೆಯಲ್ಲಿ ಬೀದಿನಾಯಿಗಳ ಹಾವಳಿ, ಹಂದಿಗಳ ಹಾವಳಿ ಹೆಚ್ಚಿದ್ದು, ಪೊದೆಗಳಲ್ಲಿ ಬೀಡುಬಿಟ್ಟಿವೆ. ನಿತ್ಯ ಮಕ್ಕಳು ಶಾಲೆಗೆ ತೆರಳಲು ಭಯದ ವಾತಾವರಣದಲ್ಲಿಯೇ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮಳೆಗಾಲದಲ್ಲಿ ರಸ್ತೆಯ ಮಧ್ಯದಲ್ಲಿ ಗುಂಡಿಗಳಲ್ಲಿ ನೀರು ನಿಂತು ತೊಂದರೆಯಾಗುತ್ತಿದೆ. ತೆರಿಗೆ ಸಂಗ್ರಹಿಸುವ ಪಟ್ಟಣ ಪಂಚಾಯಿತಿಯು ನಾಗರಿಕರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು’ ಎನ್ನುತ್ತಾರೆ ಶಿಕ್ಷಕ ಅವಿನಾಶ ಮೊಹಿತೆ.
‘ತರಳುಬಾಳು ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರವಿದ್ದು, ಅಂಗನವಾಡಿ ಕೇಂದ್ರ ನಿರ್ಮಾಣಗೊಂಡು ಹಲವು ವರ್ಷಗಳು ಕಳೆದರೂ ಇಲ್ಲಿನ ಮಕ್ಕಳಿಗೆ ಸೂಕ್ತ ಸೌಲಭ್ಯವನ್ನು ಸಂಬಂಧಿಸಿದ ಅಧಿಕಾರಿಗಳು ಪೂರೈಸಿಲ್ಲ. ಇದುವರೆಗೂ ಅಂಗನವಾಡಿ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಮಕ್ಕಳು ಶಾಲೆಗೆ ಹೋಗಿಬರಲು ಸೂಕ್ತ ರಸ್ತೆ ಇಲ್ಲ. ಹಲವು ಬಾರಿ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳಾದ ದೇವರಾಜ ಕಡೂರ ಹಾಗೂ ನಿಕ್ಷೇಪ ಮೇದೂರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.