ADVERTISEMENT

ಹಸಿರು, ಚಿತ್ರಗಳಿಂದ ಅಂದವಾದ ಕೇಂದ್ರ

ಅಧಿಕಾರಿಗಳು, ಶಿಕ್ಷಕರ ಶ್ರಮ ದಾನ

ಸುಧಾಕರ ಎಸ್.ತಳವಾರ, ಬೆಂಗಳೂರು
Published 30 ಅಕ್ಟೋಬರ್ 2020, 7:04 IST
Last Updated 30 ಅಕ್ಟೋಬರ್ 2020, 7:04 IST
ರಾಯಬಾಗದ ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರಕ್ಕೆ ಹೊಸ ರೂಪ ನೀಡಲಾಗಿದೆ
ರಾಯಬಾಗದ ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರಕ್ಕೆ ಹೊಸ ರೂಪ ನೀಡಲಾಗಿದೆ   

ಚಿಕ್ಕೋಡಿ: ಶಿಕ್ಷಣ ಇಲಾಖೆಯ ಕಚೇರಿ ಕಟ್ಟಡವೊಂದರ ಸುತ್ತ ಇಂದು ಹಸಿರಿನ ಸಿರಿ ಸೃಷ್ಟಿಯಾಗಿದೆ. ಗೋಡೆಗಳು ಚಿತ್ತಾಕರ್ಷಕ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದು, ಮಾದರಿ ಕೇಂದ್ರವಾಗಿ ಗಮನಸೆಳೆದಿದೆ.

ರಾಯಬಾಗ ಪಟ್ಟಣದಲ್ಲಿರುವ ಕ್ಷೇತ್ರ ಸಂಪನ್ಮೂಲ ಕೇಂದ್ರವೇ (ಸಿಆರ್‌ಸಿ) ಇಂತಹ ಪರಿವರ್ತನೆ ಕಂಡಿದೆ. ಈ ಬದಲಾವಣೆಗೆ ಸಮೂಹ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ಬಿ.ಎಂ. ಮಾಳಿ ಹಾಗೂ ಸಿಆರ್‌ಪಿ, ಬಿಆರ್‌ಪಿ ಹಾಗೂ ಶಿಕ್ಷಕ ಸಮೂಹ ಶ್ರಮದಾನ ಮಾಡಿದೆ. ಇಲಾಖೆಯ ಅನುದಾನ ಬಳಸಿಕೊಳ್ಳದೇ ವಂತಿಗೆ ಸಂಗ್ರಹಿಸಿ ಕೇಂದ್ರಕ್ಕೆ ಹೊಸ ರೂಪು ನೀಡಿದ್ದಾರೆ.

ಶ್ರಮದಾನದಿಂದ ಸ್ವಚ್ಛತೆ:‘ನಮ್ಮ ನಡೆ ಗುಣಾತ್ಮಕ ಶಿಕ್ಷಣದ ಜೊತೆಗೆ ಉತ್ತಮ ಪರಿಸರದತ್ತ’ ಎಂಬ ಧ್ಯೇಯದೊಂದಿಗೆ ಬಿಆರ್‌ಸಿ ಬಿ.ಎಂ. ಮಾಳಿ, ಸಿಆರ್‌ಪಿಗಳಾದ ಮೋಹನ ರಾಜಮಾನೆ, ಭೂಪಾಲ ಮಾನೆ, ಬಿ.ಎನ್. ಹಾದಿಮನಿ, ಬಿಆರ್‌ಪಿ ಅಮೋಘ ನಾಯ್ಕ, ಶಿಕ್ಷಕ ವೀರಣ್ಣ ಮಡಿವಾಳರ ವಾರಕ್ಕೂ ಹೆಚ್ಚು ಕಾಲ ಪ್ರತಿ ದಿನ ಬೆಳಿಗ್ಗೆ ಶ್ರಮದಾನದಿಂದ ಹೊಸ ರೂಪ ಕೊಟ್ಟಿದ್ದಾರೆ.

ADVERTISEMENT

ಉದ್ಯಾನ ಅಭಿವೃದ್ಧಿಪಡಿಸಲು ನಿಡಗುಂದಿಯಿಂದ ಮಣ್ಣು ತರಿಸಿ ಹಾಕಿದರು. ₹ 11ಸಾವಿರ ಖರ್ಚಿನಲ್ಲಿ ವಿವಿಧ ತಳಿಯ ಸಸಿಗಳನ್ನು ತಂದು ನೆಟ್ಟಿದ್ದಾರೆ. ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನದ ಪ್ರಯುಕ್ತ 2019ರ ಗಾಂಧಿ ಜಯಂತಿಯಂದು ಶಾಸಕ ಡಿ.ಎಂ. ಐಹೊಳೆ ಅವರಿಂದ ಉದ್ಯಾನಕ್ಕೆ ‘ಗಾಂಧಿ ವನ’ ಎಂದು ನಾಮಕರಣ ಮಾಡಿಸಿದ್ದಾರೆ. ಅಲ್ಲಿಗೆ ನೀರಿನ ಸೌಲಭ್ಯಕ್ಕಾಗಿ ಶಾಸಕರು ಕೊಳವೆಬಾವಿ ಕೊರೆಸಿದ್ದಾರೆ. ಕೇಂದ್ರದ ಇನ್ನೊಂದು ಪಕ್ಕದಲ್ಲಿ ಅಭಿವೃದ್ಧಿಪಡಿಸಿದ ಉದ್ಯಾನಕ್ಕೆ ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿಯಂದು ‘ಶಾಸ್ತ್ರೀಜಿ ವನ’ ಎಂಬ ಹೆಸರಿಡಲಾಗಿದೆ.

ಬಣ್ಣದಿಂದ:ಕಟ್ಟಡಕ್ಕೆ ಬಣ್ಣ ಬಳಿದು ಚಿತ್ರಗಳನ್ನು ಬಿಡಿಸಿ ಅಂದಗೊಳಿಸಿದ್ದಾರೆ. ಚಿತ್ರಕಲಾ ಶಿಕ್ಷಕರಾದ ಆಶಾರಾಣಿ ನಡೋಣಿ, ಭರಮ ಒಡೆಯರ, ಗೋಪಾಲ ಮೈಶಾಳೆ, ಆದಿನಾಥ ಮಲಾಜುರೆ, ಶ್ರೀಮತಿ ನಾಯಕ ಅವರು ಜನಪದ ಶೈಲಿಯ ಚಿತ್ರಗಳು, ವಿವಿಧ ಯೋಜನೆಗಳನ್ನು ಪ್ರಚುರಪಡಿಸುವ ಹಾಗೂ ಕಲಿಕಾ ಚಟುವಟಿಕೆಗಳ ಚಿತ್ರಗಳನ್ನು ಬಿಡಿಸಿ ಮೆರುಗು ನೀಡಿದ್ದಾರೆ. ಕಲಾವಿದ ಬಾಬುರಾವ್ ನಡೋಣಿ ಅವರು ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಅವರ ಚಿತ್ರಗಳನ್ನು ಬಿಡಿಸಿದ್ದಾರೆ.

‘ಕೇಂದ್ರದ ಸಿಬ್ಬಂದಿ ಮತ್ತು ಶಿಕ್ಷಕರ ಸಹಕಾರದಿಂದ ಈ ಕೆಲಸ ಸಾಧ್ಯವಾಗಿದೆ’ ಎನ್ನುತ್ತಾರೆ ಬಿರ್‌ಪಿ ಬಿ.ಎಂ. ಮಾಳಿ.

‘ಸರ್ಕಾರದ ಅನುದಾನ ಬಳಸದೆ ಆ ಕೇಂದ್ರದ ಸಿಬ್ಬಂದಿ ಮತ್ತು ಶಿಕ್ಷಕರು ವಂತಿಗೆ ಸಂಗ್ರಹಿಸಿ, ಶ್ರಮದಾನದ ಮೂಲಕ ಉದ್ಯಾನ ನಿರ್ಮಿಸಿದ್ದು, ಚಿತ್ರಗಳನ್ನು ಬಿಡಿಸಿ ಕೇಂದ್ರಕ್ಕೆ ಹೊಸ ರೂಪ ನೀಡಿರುವುದು ಶ್ಲಾಘನೀಯವಾಗಿದೆ’ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.