ನಿಪ್ಪಾಣಿ: ‘ರಾಜ್ಯ ಬಿಜೆಪಿ ಸರ್ಕಾರವು ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮೀ ಯೋಜನೆ ಸ್ಥಗಿತಗೊಂಡಿತ್ತು. ಅದಕ್ಕೆ ನಾನು ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಪ್ರಧಾನಿ ಮೋದಿ ಹಾಗೂ ಸರ್ಕಾರದ ಮಹಿಳಾ ಮತ್ತು ಬಾಲ ಕಲ್ಯಾಣ ಇಲಾಖೆಯ ಗಮನಕ್ಕೆ ತಂದೆವು. ನಮ್ಮ ಮನವಿಗೆ ಓಗೊಟ್ಟು ಸಚಿವೆ ಸ್ಮೃತಿ ಇರಾನಿಯವರು ಇದನ್ನು ಮರುಜಾರಿಗೆ ತಂದರು’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹರ್ಷ ವ್ಯಕ್ತಪಡಿಸಿದರು.
ನಗರದ ಛತ್ರಪತಿ ಶಿವಾಜಿ ಮಹಾರಾಜ ಸಭಾ ಭವನದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸುಕನ್ಯಾ ಸಮೃದ್ಧಿ ಬಾಂಡ್ ವಿತರಣಾ ಕಾರ್ಯಕ್ರಮದಲ್ಲಿ 1,465 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಿ ಅವರು ಮಾತನಾಡಿದರು.
‘ಬಿಜೆಪಿ ಸರ್ಕಾರ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿತು. ಬಡವರ ಮನೆಗಳಲ್ಲಿ ಜನಿಸಿದ ಹೆಣ್ಣು ಮಗು ಆ ಮನೆಯ ಕರ್ನಾಟಕದ ಭಾಗ್ಯಲಕ್ಷ್ಮೀ ಎಂದು ನಮ್ಮ ಸರ್ಕಾರ ಹೇಳಿತು. 18 ವರ್ಷಗಳ ನಂತರ ಫಲಾನುಭವಿಗೆ ₹ 1 ಲಕ್ಷವನ್ನು ನೀಡುವ ಯೋಜನೆ ಇದಾಗಿತ್ತು. ಇನ್ಷುರೆನ್ಸ್ ಕಂಪೆನಿ ಈ ಯೋಜನೆಯನ್ನು ಮುಂದುವರೆಸಲು ಹಿಂದೇಟು ಹಾಕಿದ ಪರಿಣಾಮವಾಗಿ ರಾಜ್ಯ ಸರ್ಕಾರದ ಈ ಯೋಜನೆ ಸ್ಥಗಿತಗೊಂಡಿತು’ ಎಂದರು.
‘18 ವರ್ಷಗಳಾದ ನಂತರ ಫಲಾನುಭವಿಗಳು ₹ 1.97 ಲಕ್ಷ ಪಡೆಯಲಿದ್ದಾರೆ. 11ನೇ ತರಗತಿ ಪ್ರವೇಶ ಪಡೆದಾಗ ಶಿಕ್ಷಣಕ್ಕಾಗಿ ಹಣಕಾಸಿನ ಕೊರತೆಯಾದರೆ, ಅರ್ಜಿ ಸಲ್ಲಿಸಿ ಶೇ 50ರಷ್ಟು ಮೊತ್ತ ಪಡೆಯಬಹುದಾಗಿದೆ’ ಎಂದರು.
ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯ ಮೇಲೆ ಬಿಇಒ ಮಹಾದೇವಿ ನಾಯಿಕ, ನಗರಸಭೆ ಮಾಜಿ ಅಧ್ಯಕ್ಷ ಜಯವಂತ ಭಾಟಲೆ, ರಾಜೇಂದ್ರ ಗುಂಡೆಶಾ, ಗೀತಾ ಪಾಟೀಲ, ಮಹಾದೇವ ಬರಗಾಲೆ, ಎಸ್.ಕೆ. ಖಜ್ಜನ್ನವರ, ಸಂತೋಷ ಸಾಂಗಾವಕರ, ಸುಭಾಷ ಕದಮ, ಸುಜಾತಾ ಕದಮ, ಕಾವೇರಿ ಮಿರ್ಜೆ, ಸುರಜ ಖವರೆ ಇದ್ದರು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಮಹಿಳಾ ಫಲಾನುಭವಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಸಿಡಿಪಿಒ ರಾಮಮೂರ್ತಿ ಕೆ.ವಿ. ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.