ADVERTISEMENT

ಮಠಾಧೀಶರ ಪಾತ್ರ ಮಹತ್ವದ್ದು: ಬಾಲಚಂದ್ರ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 1:55 IST
Last Updated 15 ಡಿಸೆಂಬರ್ 2025, 1:55 IST
ಮೂಡಲಗಿ ತಾಲ್ಲೂಕಿನ ಮುನ್ಯಾಳ–ರಂಗಾಪುರದ ಮಠದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅರಭಾವಿ ಮತಕ್ಷೇತ್ರದ ಮಠಾಧೀಶರ ವೇದಿಕೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿ ಮಾತನಾಡಿದರು 
ಮೂಡಲಗಿ ತಾಲ್ಲೂಕಿನ ಮುನ್ಯಾಳ–ರಂಗಾಪುರದ ಮಠದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅರಭಾವಿ ಮತಕ್ಷೇತ್ರದ ಮಠಾಧೀಶರ ವೇದಿಕೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿ ಮಾತನಾಡಿದರು    

ಮೂಡಲಗಿ: ‘ಸಮಾಜದ ಪರಿವರ್ತನೆಯಲ್ಲಿ ಮಠಾಧೀಶರ ಪಾತ್ರ ಮಹತ್ವದಾಗಿದ್ದು, ಸಮಾಜದ ಏಳ್ಗೆಯು ಮಠಗಳಿಂದ ಸಾಧ್ಯ’ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಮುನ್ಯಾಳ-ರಂಗಾಪುರ ಮಠದಲ್ಲಿ ಶನಿವಾರದಂದು ನೂತನವಾಗಿ ಅಸ್ತಿತ್ವಕ್ಕೆ ಬಂದ ಅರಭಾವಿ ಮತಕ್ಷೇತ್ರದ ಮಠಾಧೀಶರ ವೇದಿಕೆ ಉದ್ಘಾಟಿಸಿ, ಶ್ರೀಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಮಠಗಳು ಭಾರತದ ಧಾರ್ಮಿಕ ಪರಂಪರೆ, ಸಾಂಸ್ಕೃತಿ ಹಾಗೂ ಶೈಕ್ಷಣಿಕ ಕೇಂದ್ರಗಳಾಗಿ ಸಮಾಜದ ಬೆಳವಣಿಗೆಗೆ ಅನಿವಾರ್ಯವಾಗಿವೆ’ ಎಂದರು.

‘ದೇವರು ಹಾಗೂ ತಾಯಿ-ತಂದೆ, ಪೂಜ್ಯರ ಆಶೀರ್ವಾದ ಮತ್ತು ಜನರ ಆಶೀರ್ವಾದದಿಂದ ಜಾರಕಿಹೊಳಿ ಕುಟುಂಬದವರು ಜಿಲ್ಲೆಯಲ್ಲಿಯೇ ಗಟ್ಟಿಯಾಗಿ ಜನರ ಮುಂದೆ ನಿಲ್ಲಲು ಮತ್ತು ಸೇವೆ ಮಾಡಲು ಕಾರಣವಾಗಿದೆ. ಮುಂದೆಯೂ ಸಹ ಇದೇ ಆಶೀರ್ವಾದವು ಸದಾ ಕಾಲ ನಮ್ಮ ಮೇಲೆ ಇರಲಿ ಎಂದು ಬಯಸುತ್ತೇನೆ’ ಎಂದರು.

ADVERTISEMENT

‘ಅರಭಾವಿ ಕ್ಷೇತ್ರ ವ್ಯಾಪ್ತಿಯ ಮಠಾಧೀಶರ ವೇದಿಕೆ ಅಸ್ತಿತ್ವಕ್ಕೆ ಬಂದಿರುವುದು ಸಂತೋಷವಾಗಿದೆ. ವೇದಿಕೆಗೆ ಸಹಾಯ, ಸಹಕಾರ ನೀಡುತ್ತೇನೆ. ಕ್ಷೇತ್ರದ ಪ್ರತಿ ಹಳ್ಳಿ- ಹಳ್ಳಿಗೂ ತೆರಳಿ ಮಠಾಧೀಶರು ಧಾರ್ಮಿಕ ವಾತಾವರಣ ನಿರ್ಮಿಸುವಂತಾಗಬೇಕು. ದುಶ್ಚಟಗಳಿಂದ ಸಮಾಜ ಮುಕ್ತವಾಗಿಸಿ, ಸುಂದರ ಸಮಾಜ ನಿರ್ಮಾಣಕ್ಕೆ ಮಠಗಳು ಮುಂದಾಗಬೇಕು’ ಎಂದರು.

‘ಗೋಕಾಕ ಮತ್ತು ತಾಲ್ಲೂಕಿನಲ್ಲಿ ಅರಭಾವಿ ದುರದುಂಡೀಶ್ವರ ಮಠ, ಕೋಮು ಸಾಮರಸ್ಯ ಸಾರುವ ಸಾವಳಗಿ ಮಠ, ಶಿವಬೋಧರಂಗ ಮಠ, ಸುಣಧೊಳಿ ಮಠ ಸೇರಿದಂತೆ ಎಲ್ಲ ಮಠಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕೈಂಕರ್ಯಗಳಲ್ಲಿ ಕಾರ್ಯ ಮಾಡುವ ಮೂಲಕ ಶಾಂತಿ, ನೆಮ್ಮದಿ ಬಿತ್ತುತ್ತಿವೆ’ ಎಂದರು.

ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಮಠಾಧೀಶರು ವೇದಿಕೆಯು ಸಮಾಜಮುಖಿಯಾಗಿ ಕೆಲಸ ಮಾಡಲಿ. ಪ್ರತಿ ಗ್ರಾಮಗಳಿಗೆ ತೆರಳಿ ಗ್ರಾಮಗಳ ನೈರ್ಮಲೀಕರಣಕ್ಕೆ ಆದ್ಯತೆ ನೀಡಬೇಕು’ ಎಂದರು.

ಮಠಾಧೀಶರ ವೇದಿಕೆಯ ಅಧ್ಯಕ್ಷ ಮುನ್ಯಾಳ-ರಂಗಾಪುರ ಮಠದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಅರಭಾವಿ ಕ್ಷೇತ್ರದ ಮಠಾಧೀಶರ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಜರುಗಿತು. ಹುಣಶ್ಯಾಳ ಪಿ.ಜಿ ಕೈವಲ್ಯಾಶ್ರಮದ ನಿಜಗುಣ ದೇವರು ವೇದಿಕೆಯ ಸದುದ್ದೇಶಗಳನ್ನು ವಿವರಿಸಿದರು. ‌ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು.

ಸುಣಧೋಳಿಯ ಶಿವಾನಂದ ಸ್ವಾಮೀಜಿ, ಹೊಸ ಯರಗುದ್ರಿಯ ಸಿದ್ಧಪ್ರಭು ಶಿವಾಚಾರ್ಯ ಸ್ವಾಮೀಜಿ, ಮನ್ನಿಕೇರಿಯ ವಿಜಯಸಿದ್ದೇಶ್ವರ ಸ್ವಾಮೀಜಿ, ಶಿವಾಪೂರ(ಹ) ಅಡವಿ ಸಿದ್ಧೇಶ್ವರ ಸ್ವಾಮೀಜಿ, ಯಾದವಾಡ ಚಕ್ರೇಶ್ವರ ದೇವರು, ಹಡಗಿನಾಳದ ಮುತ್ತೇಶ್ವರ ಸ್ವಾಮಿಗಳು, ಜೋಕ್ಕಾನಟ್ಟಿಯ ಬಿಳಿಯಾನ ಸಿದ್ಧ ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ನಾಗನೂರಿನ ಕಾವ್ಯಶ್ರೀ ಅಮ್ಮನವರು, ಕಪರಟ್ಟಿಯ ಬಸವರಾಜ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.