ADVERTISEMENT

ಕೃಷ್ಣಾ ನದಿಗೆ ನೀರು ಹರಿಸಲು ಕೋರಿಕೆ: ಮಹಾರಾಷ್ಟ್ರ ಸಿಎಂ ಭೇಟಿಯಾದ ಬಿಜೆಪಿ ನಿಯೋಗ

​ಪ್ರಜಾವಾಣಿ ವಾರ್ತೆ
Published 4 ಮೇ 2019, 9:56 IST
Last Updated 4 ಮೇ 2019, 9:56 IST
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರನ್ನು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರ ನೇತೃತ್ವದ ಬಿಜೆಪಿ ಮುಖಂಡರ ನಿಯೋಗ ಮುಂಬೈನಲ್ಲಿ ಶುಕ್ರವಾರ ರಾತ್ರಿ ಭೇಟಿ ಮಾಡಿ, ಕೃಷ್ಣಾ ನದಿಗೆ ನೀರು ಹರಿಸುವಂತೆ ಮನವಿ ಸಲ್ಲಿಸಿತು
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರನ್ನು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರ ನೇತೃತ್ವದ ಬಿಜೆಪಿ ಮುಖಂಡರ ನಿಯೋಗ ಮುಂಬೈನಲ್ಲಿ ಶುಕ್ರವಾರ ರಾತ್ರಿ ಭೇಟಿ ಮಾಡಿ, ಕೃಷ್ಣಾ ನದಿಗೆ ನೀರು ಹರಿಸುವಂತೆ ಮನವಿ ಸಲ್ಲಿಸಿತು   

ಬೆಳಗಾವಿ: ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರ ನೇತೃತ್ವದ ಬಿಜೆಪಿ ಮುಖಂಡರ ನಿಯೋಗ ಮನವಿ ಮಾಡಿಕೊಂಡಿದೆ.

ಮುಂಬೈನಲ್ಲಿ ಶುಕ್ರವಾರ ರಾತ್ರಿ ಫಡಣವೀಸ್‌ ಅವರನ್ನು ಭೇಟಿ ಮಾಡಿದ ಮುಖಂಡರು ಅರ್ಧಗಂಟೆಗೂ ಹೆಚ್ಚು ಚರ್ಚಿಸಿದರು. ಕೃಷ್ಣಾ ನದಿ ಬತ್ತಿ ಹೋಗಿರುವ ವಿಷಯವನ್ನು ಗಮನಕ್ಕೆ ತಂದರು. ಆದಷ್ಟು ಬೇಗ ನೀರು ಹರಿಸುವಂತೆ ಕೋರಿಕೊಂಡರು.

‘ಉತ್ತರ ಕರ್ನಾಟಕದ ನೀರಿನ ಸಮಸ್ಯೆ ಕುರಿತು ಫಡಣವೀಸ್‌ ಅವರು ತಾಳ್ಮೆಯಿಂದ ಆಲಿಸಿದರು. ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ನೀರು ಬಿಡಲು ಕ್ರಮಕೈಗೊಳ್ಳುವಂತೆ ಸೂಚಿಸಿದರು. ಮೊದಲ ಹಂತದಲ್ಲಿ 2 ಟಿಎಂಸಿ ಹಾಗೂ ಎರಡನೇ ಹಂತದಲ್ಲಿ 2 ಟಿಎಂಸಿ ನೀರು ಬಿಡುವ ಸಾಧ್ಯತೆ ಇದೆ’ ಎಂದು ನಿಯೋಗದಲ್ಲಿದ್ದ ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ADVERTISEMENT

ಡಿ.ಕೆ.ಶಿ ಜೊತೆ ಚರ್ಚೆ

ಇದೇ ಸಂದರ್ಭದಲ್ಲಿ ಫಡಣವೀಸ್‌ ಅವರು ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಚುನಾವಣಾ ನೀತಿ ಸಂಹಿತೆ ಮುಗಿದ ತಕ್ಷಣ ರಾಜ್ಯದ ನಿಯೋಗದ ಜೊತೆ ಮುಂಬೈಗೆ ಬಂದು ನೀರು ಹಂಚಿಕೆ ಕುರಿತು ಒಪ್ಪಂದ ಮಾಡಿಕೊಳ್ಳುವುದಾಗಿ ಶಿವಕುಮಾರ್‌ ಹೇಳಿದರು ಎಂದು ಮಹಾಂತೇಶ ತಿಳಿಸಿದ್ದಾರೆ.

ನಿಯೋಗದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಪಿ.ರಾಜೀವ ಹಾಗೂ ಮುಖಂಡ ಅಣ್ಣಾಸಾಹೇಬ ಜೊಲ್ಲೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.