ADVERTISEMENT

ದ್ರಾಕ್ಷಿ ಬೆಳೆಗಾರರಿಗೆ ನೆರವಾಗಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 15:27 IST
Last Updated 20 ಅಕ್ಟೋಬರ್ 2020, 15:27 IST
ಐಗಳಿಯ ಕಲ್ಯಾಣ ನಗರದಲ್ಲಿರುವ ಒಣದ್ರಾಕ್ಷಿ ಘಟಕಕ್ಕೆ ಕೆನರಾ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿದರು
ಐಗಳಿಯ ಕಲ್ಯಾಣ ನಗರದಲ್ಲಿರುವ ಒಣದ್ರಾಕ್ಷಿ ಘಟಕಕ್ಕೆ ಕೆನರಾ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿದರು   

ಐಗಳಿ: ‘ಕೊರೊನಾ ಹಾಗೂ ಅಕಾಲಿಕ ಮಳೆಯಿಂದಾಗಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ದ್ರಾಕ್ಷಿ ಬೆಳೆಗಾರರಿಗೆ ಆರ್ಥಿಕವಾಗಿ ನೆರವಾಗಬೇಕು ಮತ್ತು ನೆರೆಯ ಮಹಾರಾಷ್ಟ್ರದ ಮೇಲಿನ ಅವಲಂಬನೆ ತಪ್ಪಿಸಬೇಕು’ ಎಂದು ಅಥಣಿ ತಾಲ್ಲೂಕು ಒಣದ್ರಾಕ್ಷಿ ಸಂಸ್ಕರಣಾ ಘಟಕದ ಅಧ್ಯಕ್ಷ ಶಹಜಹಾನ್‌ ಡೊಂಗರಗಾಂವ ಆಗ್ರಹಿಸಿದರು.

ಇಲ್ಲಿನ ಕಲ್ಯಾಣ ನಗರದಲ್ಲಿರುವ ಕ್ಲಸ್ಟರ್‌ಗೆ ಕೆನರಾ ಬ್ಯಾಂಕ್‌ ವಿಭಾಗೀಯ ಪ್ರಾದೇಶಿಕ ಪ್ರಬಂಧಕ ಶ್ರೀನಿವಾಸ ಹಾಗೂ ಹಿರಿಯ ಪ್ರಬಂಧಕ ವಸಂತ ಒಳಗೊಂಡ ಅಧಿಕಾರಿಗಳ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ದ್ರಾಕ್ಷಿ ಮಾರಿದವರಿಗೆ ಕೊರೊನಾದಿಂದಾಗಿ ನ್ಯಾಯಯುತ ಬೆಲೆ ಸಿಗಲಿಲ್ಲ. ಮಾರಲಾಗದೆ ಸ್ಟೋರೇಜಲ್ಲಿಟ್ಟವರಿಗೆ ಈಗಲೂ ಬೆಲೆ ಸಿಗುತ್ತಿಲ್ಲ. ಈಗ ಮತ್ತೆ ದ್ರಾಕ್ಷಿ ಬೆಳೆಯಲು ಖರ್ಚು ಅನಿವಾರ್ಯ. ಅದಕ್ಕಾಗಿ ಹಣ ಬೇಕಾದರೆ, ಮಹಾರಾಷ್ಟ್ರದ ದಲ್ಲಾಳಿಗಳ ಕೈಕಾಲು ಹಿಡಿದು ಹೆಚ್ಚಿನ ಬಡ್ಡಿಗೆ ಮುಂಗಡ ತರಬೇಕಾದ ಅನಿವಾರ್ಯವಿದೆ. ಇದರಿಂದ ರಾಜ್ಯದ ಆದಾಯ ಅನ್ಯರ ಪಾಲಾಗುತ್ತಿದೆ. ಹೀಗಾಗಿ, ಸಾಲ ನೀಡಿ ರೈತರನ್ನು ರಕ್ಷಿಸಬೇಕು’ ಎಂದು ಕೋರಿದರು.

ADVERTISEMENT

‘ನಮ್ಮ ಖಾತೆದಾರ ರೈತರಿಗೆ ಹೆಚ್ಚುವರಿ ಸಾಲ ನೀಡಲು ತುರ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಬ್ಯಾಂಕ್ ಅಧಿಕಾರಿಗಳು ಭರವಸೆ ನೀಡಿದರು.

ಘಟಕದ ಸಲಹೆಗಾರ ಎಂ.ಎಲ್. ಹಾಲಳ್ಳಿ ಮಾತನಾಡಿದರು.

ಸ್ಥಳೀಯರಾದ ಕಾಶಿನಾಥ ಕುಂಬಾರ್ಕರ, ನೂರಅಹ್ಮದ ಡೊಂಗರಗಾಂವ, ಸಿ.ಎಚ್. ಪಾಟೀಲ, ಈರಗೌಡ ಪಾಟೀಲ, ದಸ್ತಗೀರ ಕೊರಬು, ಶ್ರೀಮಂತ ಮುಧೋಳ, ರಿಯಾಜ ಡೊಂಗರಗಾಂವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.