ಚನ್ನಮ್ಮನ ಕಿತ್ತೂರು: ‘ಬಣಜಿಗ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈಗಾಗಲೇ ಸರ್ಕಾರ ಪ್ರವರ್ಗ 2ಎ ಮೀಸಲಾತಿ ನೀಡಿದೆ. ಇದನ್ನು ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸದೆ ನೌಕರಿ ಪಡೆಯುವಲ್ಲಿಯೂ ಮೀಸಲಾತಿ ವಿಸ್ತರಣೆ ಆಗಲಿದೆ’ ಎಂದು ಸಂಸದ ಜಗದೀಶ ಶೆಟ್ಟರ ತಿಳಿಸಿದರು.
‘ನೌಕರಿಯಲ್ಲಿಯೂ ಮೀಸಲಾತಿ ಪಡೆಯುವಲ್ಲಿ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ವಿಷಯದಲ್ಲಿ ಆದಷ್ಟು ಶೀಘ್ರ ನಿರ್ಧಾರ ಕೈಗೊಂಡು ಸಮಾಜದ ಯುವಕರಿಗೆ ಅನುಕೂಲ ಮಾಡಿಕೊಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ನಾನು ಮುಖ್ಯಮಂತ್ರಿ ಆಗಿದ್ದ 2012ರ ಅವಧಿಯಲ್ಲಿ ಹೊಸ ಚನ್ನಮ್ಮನ ಕಿತ್ತೂರು ತಾಲ್ಲೂಕು ಘೋಷಣೆ ಮಾಡಿ ಅಭಿವೃದ್ಧಿಗೆ ಚಾಲನೆ ನೀಡಿದ್ದೆ. ಕಿತ್ತೂರು ಮಾರ್ಗವಾಗಿ ರೈಲು ಸಂಚರಿಸುವ ಈ ಭಾಗದ ಸಾರ್ವಜನಿಕರ ಬೇಡಿಕೆಯೂ ಈಡೇರಲಿದೆ. ಈ ನಿಟ್ಟಿನಲ್ಲಿ ಇಲಾಖೆಯ ಜತೆಗೆ ಅನೇಕ ಸಭೆಗಳನ್ನು ಮಾಡಲಾಗಿದೆ’ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಕಾರಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ಕಿತ್ತೂರು ಸಂಸ್ಥಾನದ ಮೂಲ ಸಂಸ್ಥಾಪಕರಾಗಿದ್ದ ಹಿರೇಮಲ್ಲ ಮತ್ತು ಚಿಕ್ಕ ಮಲ್ಲಶೆಟ್ಟಿ ಮೂಲ ಬಣಜಿಗ ಸಮುದಾಯದವರು. ಕಿತ್ತೂರಿಗೆ ಅವರ ಕೊಡುಗೆ ಸ್ಮರಣೀಯವಾಗಿದೆ’ ಎಂದರು.
ಶಾಸಕ ಬಾಬಾಸಾಹೇಬ ಪಾಟೀಲ ಅವರು, ‘ಬಣಜಿಗ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ಮತ್ತು ನಿಗಮದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗುವುದು’ ಎಂದರು.
ಹುಲಿಕಟ್ಟಿಯ ಮಹಿಳಾ ಹಾಲು ಉತ್ಪಾದಕ ಸಂಘದ ಅಧ್ಯಕ್ಷೆ ಗಾಯತ್ರಿ ಶಹಪುರ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈ ಸಿದ್ದರಾಮ ಮಾರಿಹಾಳ ಹಾಗೂ ವಿದ್ಯಾರ್ಥಿಗಳನ್ನು ಇದೇ ವೇಳೆ ಸತ್ಕರಿಸಲಾಯಿತು.
ಬೈಲಹೊಂಗಲ ತಾಲ್ಲೂಕು ಘಟಕದ ಅಧ್ಯಕ್ಷ ಶಂಕ್ರಪ್ಪಣ್ಣ ಬಾಳಿ, ರಾಜ್ಯ ಸಮಿತಿ ನಿರ್ದೇಶಕ ಚನ್ನಪ್ಪ ಶೆಟ್ಟರ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈ ಸಿದ್ಧರಾಮ ಮಾರಿಹಾಳ, ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ಮೃತ್ಯುಂಜಯ ಮಾರಿಹಾಳ, ಸಮಾಜದ ಮುಖಂಡರಾದ ಸೋಮಶೇಖರ ಹಲಸಗಿ, ದಿನೇಶ ವಳಸಂಗ, ಮಲ್ಲಿಕಾರ್ಜುನ ಸಾಣಿಕೊಪ್ಪ, ಸುನಿಲ ಘಿವಾರಿ, ಮಹಾಂತೇಶ ಸಿಂಬಿ, ಡಾ. ಈರಣ್ಣ ಕೌಜಲಗಿ, ವಿವೇಕಾನಂದ ಕತ್ತಿಶೆಟ್ಟರ, ವಿರೂಪಾಕ್ಷ ಮಾರಿಹಾಳ, ಮಹಾಂತೇಶ ಶೆಟ್ಟರ, ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.