
ಬೆಳಗಾವಿ: ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿಗಾಗಿ ಜಾರಿಗೊಳಿಸಿರುವ ವರ್ಗಾವಣೆ ಕೌನ್ಸೆಲಿಂಗ್ ನಿರ್ವಹಣಾ ವ್ಯವಸ್ಥೆಗೆ (ಟಿಸಿಎಂಎಸ್) ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ವೃಂದದ ಹುದ್ದೆ ಸೇರಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ರಾಜ್ಯದಲ್ಲಿ 765 ಆರ್‌ಎಫ್‌ಒ ಹುದ್ದೆಗಳು ಮಂಜೂರಾಗಿವೆ. ತಮ್ಮನ್ನು ಟಿಸಿಎಂಎಸ್‌ಗೆ ಸೇರಿಸುವಂತೆ ರಾಜ್ಯ ವಲಯ ಅರಣ್ಯಾಧಿಕಾರಿಗಳ ಸಂಘದ ಸದಸ್ಯರು ಐದಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ನ್ಯಾಯ ಸಿಕ್ಕಿಲ್ಲ.
ಗಸ್ತು ವನಪಾಲಕ ಮತ್ತು ಉಪ ವಲಯ ಅರಣ್ಯಾಧಿಕಾರಿ ವೃಂದದ ಹುದ್ದೆ ವರ್ಗಾವಣೆಗೆ ಟಿಸಿಎಂಎಸ್ ಜಾರಿಗೆ ತರಲಾಗಿದೆ. ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕೈಗೊಂಡ ಈ ಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಆದರೆ, ಆರ್‌ಎಫ್‌ಒ ವೃಂದ ಹುದ್ದೆಯನ್ನು ಈ ವ್ಯವಸ್ಥೆಯಿಂದ ಹೊರಗೆ ಇಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
‘ಈಗ ರಾಜಕೀಯ ಪ್ರಭಾವ, ವೈಯಕ್ತಿಕ ಶಿಫಾರಸು ಆಧರಿಸಿ, ಆರ್‌ಎಫ್‌ಒ ಹುದ್ದೆ ವರ್ಗಾವಣೆ ನಡೆಯುತ್ತಿದೆ. ಇದರಿಂದಾಗಿ ಮುಕ್ತವಾಗಿ ಕೆಲಸ ಮಾಡಲಾಗುತ್ತಿಲ್ಲ’ ಎಂದು ಜಿಲ್ಲೆಯ ವಲಯ ಅರಣ್ಯಾಧಿಕಾರಿಯೊಬ್ಬರು ‘ಪ್ರಜಾವಾಣಿ’ ಮುಂದೆ ಬೇಸರ ವ್ಯಕ್ತಪಡಿಸಿದರು.
‘ಜಿಲ್ಲೆಯಲ್ಲಿ ಹಲವರು ಅರಣ್ಯ ಅತಿಕ್ರಮಣ ಮಾಡುತ್ತಾರೆ. ಅರಣ್ಯದಲ್ಲಿನ ವಸ್ತು ಕದಿಯುತ್ತಾರೆ. ವನ್ಯಪ್ರಾಣಿಗಳ ಮೇಲೆ ದಾಳಿ ಮಾಡುತ್ತಾರೆ. ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಮುಂದಾದರೆ, ರಾಜಕಾರಣಿಗಳು ಮಧ್ಯಪ್ರವೇಶಿಸುವ ಸಾಧ್ಯತೆ ಇರುತ್ತದೆ. ಟಿಸಿಎಂಎಸ್‌ನಡಿ ನಮ್ಮನ್ನು ಸೇರಿಸಿದರೆ, ನಾವು ರಾಜಕೀಯ ಒತ್ತಡದಿಂದ ಮುಕ್ತರಾಗುತ್ತೇವೆ’ ಎಂದು ಮತ್ತೊಬ್ಬ ವಲಯ ಅರಣ್ಯಾಧಿಕಾರಿ ಹೇಳಿದರು.
‘ರಾಜ್ಯದಲ್ಲಿ ಅಬಕಾರಿ ಇಲಾಖೆಯಲ್ಲಿ ನಿರೀಕ್ಷಕರ ಹಂತದವರೆಗಿನ ಸಿಬ್ಬಂದಿ ವರ್ಗಾವಣೆಗೆ ಆನ್‌ಲೈನ್ ಪೋರ್ಟಲ್ ಬಳಸಲಾಗುತ್ತಿದೆ. ಅದೇ ಮಾದರಿಯನ್ನು ಅರಣ್ಯ ಇಲಾಖೆಯೂ ಅನುಸರಿಸಬೇಕು’ ಎಂದು ಅವರು ಒತ್ತಾಯಿಸಿದರು.
ಟಿಸಿಎಂಎಸ್‌ಗೆ ಆರ್‌ಎಫ್‌ಒ ವೃಂದದ ಹುದ್ದೆಯನ್ನು ಸೇರ್ಪಡೆಗೊಳಿಸಿ ಪಾರದರ್ಶಕವಾಗಿ ಆನ್‌ಲೈನ್ ವರ್ಗಾವಣೆ ವ್ಯವಸ್ಥೆ ಜಾರಿಗೆ ತರುವ ವಿಚಾರ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ. ಬೇಗ ಅದು ಈಡೇರುತ್ತದೆ ಎನ್ನುವ ವಿಶ್ವಾಸವಿದೆಸಿ.ಎಸ್.ಷಡಾಕ್ಷರಿ ಅಧ್ಯಕ್ಷ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
ಟಿಸಿಎಂಎಸ್‌ಗೆ ಆರ್‌ಎಫ್‌ಒ ವೃಂದದ ಸೇರ್ಪಡೆ ಕುರಿತು ಪರಿಶೀಲಿಸಿ ಕ್ರಮ ವಹಿಸಲಾಗುವುದುಈಶ್ವರ ಖಂಡ್ರೆ ಅರಣ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.