
ಮೂಡಲಗಿ: ತಾಲ್ಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳು ತಮ್ಮ ತಾಯಂದಿರ ಪಾದಗಳನ್ನು ತಟ್ಟೆಯಲ್ಲಿ ಇರಿಸಿ, ನೀರಿನಿಂದ ತೊಳೆದರು. ಅವುಗಳಿಗೆ ವಿಭೂತಿ, ಅರಿಸಿಣ, ಕುಂಕುಮ ಲೇಪಿಸಿ, ಹೂವುಗಳನ್ನಿಟ್ಟು ಪೂಜಿಸಿದರು. ನಂತರ, ಹೆತ್ತಮ್ಮನ ಪಾದಗಳಿಗೆ ನಮಸ್ಕರಿಸಿದರು. ತಾಯಂದಿರು ಸಹ ಮಕ್ಕಳ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದರು. ಈ ಅಪರೂಪದ ದೃಶ್ಯ ಹೃದಯ ತುಂಬುವಂತಿತ್ತು.
ಇಂದು ಟಿ.ವಿ, ಮೊಬೈಲ್ ಹಾವಳಿಯಿಂದಾಗಿ ಮಕ್ಕಳಲ್ಲಿ ಸಂಸ್ಕಾರ ಮರೆಯಾಗುತ್ತಿದೆ. ತಂದೆ–ತಾಯಿ, ಶಿಕ್ಷಕರು ಹಾಗೂ ಹಿರಿಯರ ಬಗ್ಗೆ ಗೌರವ ಭಾವ ಕ್ಷೀಣಿಸುತ್ತಿದೆ. ಇದನ್ನು ಮನಗಂಡ ತುಕ್ಕಾನಟ್ಟಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಎ.ವಿ.ಗಿರೆಣ್ಣವರ ಅವರು ಮಕ್ಕಳಿಗೆ ಸಂಸ್ಕಾರ ಪಾಠ ಹೇಳುವುದಷ್ಟೇ ಅಲ್ಲ, ಪ್ರಾಯೋಗಿಕವಾಗಿ ಮಕ್ಕಳಿಗೆ ಅದನ್ನು ಕಲಿಸುತ್ತಿದ್ದಾರೆ.
ಪ್ರತಿವರ್ಷ ಪಾಲಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಿ, ತಾಯಿ ಪಾದಪೂಜೆ ಮಾಡಿಸುವ ಮೂಲಕ ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತುತ್ತಿದ್ದಾರೆ. ತಾಯಂದಿರು ಪಾದಪೂಜೆ ಮಾಡಿಸಿಕೊಳ್ಳುವುದಷ್ಟೇ ಅಲ್ಲ, ‘ಎಷ್ಟೇ ಕಷ್ಟ ಬಂದರೂ ನಮ್ಮ ಮಕ್ಕಳನ್ನು ಶಾಲೆ ಬಿಡಿಸುವುದಿಲ್ಲ’ ಎಂದು ಪ್ರತಿಜ್ಞೆ ಮಾಡುತ್ತಿದ್ದಾರೆ.
ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ: 1ರಿಂದ 8ನೇ ತರಗತಿ ಹೊಂದಿರುವ ಈ ಶಾಲೆಯಲ್ಲಿ 750 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮೂಡಲಗಿ ವಲಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿದ ಎರಡನೇ ಶಾಲೆ ಎನ್ನುವ ಹೆಗ್ಗಳಿಕೆ ಇದು ಪಾತ್ರವಾಗಿದೆ. ಕೂಲಿ–ಕಾರ್ಮಿಕರ ಮಕ್ಕಳೇ ಹೆಚ್ಚಿರುವ ಈ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟದೊಂದಿಗೆ ತರಹೇವಾರಿ ಖಾದ್ಯ ಉಣಡಿಸಲಾಗುತ್ತಿದೆ. ಈ ಮೂಲಕ ಇತರ ಶಾಲೆಗೆ ವಿದ್ಯಾರ್ಥಿಗಳನ್ನೂ ಸೆಳೆಯಲಾಗುತ್ತಿದೆ.
ನಮಗೂ ಖುಷಿಯಾಗಿದೆ: ‘ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಜತೆಗೆ, ತಾಯಂದಿರಿಗೂ ಶಿಕ್ಷಣದ ಮಹತ್ವ ಸಾರಲು ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿರುವುದು ಖುಷಿ ತಂದಿದೆ’ ಎಂದು ಮಹಾದೇವಿ ಹುಲಕುಂದ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.