ಬೆಳಗಾವಿ: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್. ಈ ಮಾಸದಲ್ಲಿ ಮುಸ್ಲಿಮರು ಒಂದು ತಿಂಗಳ ಕಾಲ ಉಪವಾಸ ವ್ರತ(ರೋಜಾ) ಕೈಗೊಳ್ಳುತ್ತಾರೆ. ಇದರಿಂದ ನಾವು ಅಲ್ಲಾಹ್‌ನ ಕೃಪೆಗೆ ಪಾತ್ರರಾಗುತ್ತೇವೆ ಎಂಬ ನಂಬಿಕೆ ಇದೆ. ಇಲ್ಲಿ ಹಿಂದೂ ಮಹಿಳೆಯೊಬ್ಬರು ರೋಜಾ ಕೈಗೊಳ್ಳುವ ಮೂಲಕ ಮುಸ್ಲಿಮರ ಮೆಚ್ಚುಗೆಗೂ ಪಾತ್ರವಾಗಿದ್ದಾರೆ.
ಇಲ್ಲಿನ ಮಜಗಾವಿಯ ಭಕ್ತಿ ಶ್ರೀಶೈಲ ಖಾಲಿಬಾಗ್(33) ರೋಜಾ ಮಾಡುತ್ತಿರುವವರು. ಖಾಸಗಿ ಶಾಲೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ ಅವರು, ಸತತ 16 ವರ್ಷಗಳಿಂದ ರೋಜಾ ಕೈಗೊಳ್ಳುತ್ತಿದ್ದಾರೆ.
‘ನಿತ್ಯ ಬೆಳಿಗ್ಗೆ 4.15ಕ್ಕೆ ಎದ್ದು ಸಹರಿಗೆ ತಯಾರಾಗುತ್ತೇನೆ. ಹಣ್ಣು, ಬಿಸ್ಕೆಟ್, ಉಪಾಹಾರ ಸೇವಿಸುತ್ತೇನೆ. ನಿಗದಿತ ಸಮಯಕ್ಕೂ ಮುನ್ನ ಮಂತ್ರ(ನಿಯತ್) ಪಠಿಸಿ ರೋಜಾ ಆರಂಭಿಸುತ್ತೇನೆ. ಸಂಜೆ ಇಫ್ತಾರ್ ವೇಳೆ ನಿಯತ್ ಪಠಿಸಿ ರೋಜಾ ಮುಕ್ತಾಯಗೊಳಿಸುತ್ತೇನೆ. ಖರ್ಜೂರ ಸೇವಿಸಿದ ನಂತರ ಬೇರೆ ಆಹಾರ ಸೇವಿಸುತ್ತೇನೆ. ಬೆಳಗಿನ ವೇಳೆ ಹನಿ ನೀರನ್ನೂ ಸೇವಿಸುವುದಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಹಿಂದೆ ನಮ್ಮ ಅಜ್ಜಿ ರೋಜಾ ಕೈಗೊಳ್ಳುತ್ತಿದ್ದರು. ಪಿಯು ಕೋರ್ಸ್‌ಗೆ ಪ್ರವೇಶ ಪಡೆದ ನಂತರ ನಾನೂ ಈ ಬಗ್ಗೆ ಆಸಕ್ತಿ ತಳೆದೆ. ಆರಂಭದ ವರ್ಷಗಳಲ್ಲಿ ಬಢೇ ರೋಜಾ (15 ಮತ್ತು 27ನೇ ದಿನಗಳಂದು) ಮಾತ್ರ ಮಾಡಿದೆ. ಆದರೆ, ಏನೂ ತೊಂದರೆಯಾಗಲಿಲ್ಲ. ಮನಸ್ಸಿಗೆ ಸಂತೃಪ್ತಿ ದೊರೆಯಿತು. ನಂತರದ ವರ್ಷಗಳಲ್ಲಿ ತಿಂಗಳಿಡೀ ಉಪವಾಸ ಮಾಡಲು ಆರಂಭಿಸಿದೆ’ ಎಂದು ಹೇಳಿದರು.
‘ಸಮಾಜದಲ್ಲಿ ಯಾವುದೇ ಧರ್ಮದವರೂ ಬೇರೆ ಬೇರೆಯಲ್ಲ. ನನಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದವರೂ ಸ್ನೇಹಿತರಿದ್ದಾರೆ. ಎಲ್ಲರೊಂದಿಗೆ ಸಹಬಾಳ್ವೆಯಿಂದ ಬದುಕುತ್ತಿದ್ದೇನೆ. ಹಬ್ಬ–ಹರಿದಿನ ಹಾಗೂ ಸಮಾರಂಭಗಳ ವೇಳೆ ಅವರ ಮನೆಗೆ ಹೋಗಿ ಊಟ ಮಾಡುತ್ತೇನೆ. ನಮ್ಮ ಮನೆಯ ಕಾರ್ಯಕ್ರಮಗಳಿಗೆ ಸರ್ವಧರ್ಮೀಯರು ಬರುತ್ತಾರೆ. ಎಲ್ಲರಿಗೂ ದೇವರೊಬ್ಬನೇ ಎಂದು ನಂಬಿದವಳು ನಾನು. ಹಾಗಾಗಿ ರಂಜಾನ್ ಮಾಸ್‌ದಲ್ಲಿ ರೋಜಾ ಮಾಡುತ್ತಿದ್ದೇನೆ’ ಎನ್ನುತ್ತಾರೆ ಭಕ್ತಿ.
‘ಮುಸ್ಲಿಂ ಸ್ನೇಹಿತೆಯರು ನನಗೆ ರೋಜಾದ ವೇಳಾಪಟ್ಟಿ ಹಾಗೂ ನಿಯತ್ ಮಾಹಿತಿ ಕಳುಹಿಸುತ್ತಾರೆ. ಅವರೆಂದೂ ನನಗೆ ರೋಜಾ ಮಾಡುವಂತೆ ಒತ್ತಾಯಿಸಿಲ್ಲ. ನಾನೇ ಸ್ವಯಂಪ್ರೇರಣೆಯಿಂದ ಮಾಡುತ್ತಿದ್ದೇನೆ’ ಎಂದ ಅವರು, ‘ರಂಜಾನ್ ಮಾಸ ಆರಂಭಗೊಂಡು 16 ದಿನಗಳಾಗಿವೆ. ನಾನು ಈವರೆಗೆ 11 ದಿನ ರೋಜಾ ಮಾಡಿದ್ದೇನೆ. ಈ ಮಾಸಾಂತ್ಯದವರೆಗೂ ಮಾಡುತ್ತೇನೆ. ಅಲ್ಲಾಹ್ ದೇವರು ಎಲ್ಲರಿಗೂ ಒಳಿತು ಮಾಡಲಿ’ ಎಂದು ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.