ADVERTISEMENT

‘ಕಿತ್ತೂರು ಸಂಸ್ಥಾನ: ನಿಖರತೆಗೆ ಸಂಶೋಧನೆ ಅಗತ್ಯ’

ಕ್ರಾಂತಿವೀರನ ಜನ್ಮ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 5:51 IST
Last Updated 17 ಆಗಸ್ಟ್ 2021, 5:51 IST
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಮತ್ತು ರಾಯಣ್ಣ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಡಾ.ಎಂ. ಜಯಪ್ಪ ಉದ್ಘಾಟಿಸಿದರು
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಮತ್ತು ರಾಯಣ್ಣ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಡಾ.ಎಂ. ಜಯಪ್ಪ ಉದ್ಘಾಟಿಸಿದರು   

ಬೆಳಗಾವಿ: ‘ಕಿತ್ತೂರಿನ ಅನೇಕ ವಿಷಯಗಳು ಅಸ್ಪಷ್ಟವಾಗಿದ್ದು, ಅವುಗಳ ನಿಖರತೆಗಾಗಿ ಇನ್ನೂ ಸಂಶೋಧನೆ ನಡೆಯಬೇಕು’ ಎಂದು ರಾಣಿ ಪಾರ್ವತಿದೇವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಎಚ್.ಬಿ. ಕೋಲ್ಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

‌ನಗರದ ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠವು ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಲಾವಣಿಗಳಲ್ಲಿ ಸಂಗೊಳ್ಳಿ ರಾಯಣ್ಣ’ ವಿಷಯ ಕುರಿತು ಉಪನ್ಯಾಸ ನೀಡಿದರು.

‘ರಾಯಣ್ಣನ ಕುರಿತು ಶಿಷ್ಟ ಮತ್ತು ಜಾನಪದ ಸಾಹಿತ್ಯದಲ್ಲಿ ದಾಖಲೆಗಳು ಸಿಗುತ್ತವೆ. ಆದರೆ, ಜಾನಪದ ದಾಖಲೆಗಳೆ ಪ್ರಮುಖವಾಗಿವೆ. ಅವರ ಬಗ್ಗೆ 7 ಲಾವಣಿಗಳಿವೆ. ಹೆಬ್ಬಳ್ಳಿ ಬಸವ, ಬೈಲಹೊಂಗಲದ ಶಾಮರಾವ್ ಕುಲಕರ್ಣಿ, ಸಂಗೊಳ್ಳಿ ಮೋದಿನಸಾಬ, ಹುಲಕುಂದ ಭೀಮಕವಿ, ಚಿಕ್ಕನಂದ ಶಾಹಿರ, ನೇಸರಗಿ ಅಡಿವೆಪ್ಪ ಚೋಬಾರಿ ಮತ್ತು ಕಂದಭೀಮ ಅವರು ರಚಿಸಿದವು ಮೂಲ ಲಾವಣಿಗಳಾಗಿವೆ. ಇವುಗಳಿಂದ 12ಕ್ಕಿಂತ ಹೆಚ್ಚು ಲಾವಣಿಗಳು ಸೃಷ್ಟಿಯಾಗಿವೆ’ ಎಂದು ತಿಳಿಸಿದರು.

ADVERTISEMENT

‘ರಾಯಣ್ಣ ಮೊದಲ ಬಾರಿಗೆ ಬ್ರಿಟಿಷರ ಸೆರೆಮನಿಯಿಂದ ಹೊರ ಬಂದ ಮೇಲೆ ತನ್ನದೇ ಆದ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಜನತಾ ಕ್ರಾಂತಿ ಹುಟ್ಟು ಹಾಕಿದ. ರಾಯಣ್ಣ ಕಿತ್ತೂರಿನ ಸಂಸ್ಥಾನದಲ್ಲಿ ಯಾವುದೇ ಸ್ಥಾನಮಾನ ಬಯಸಿರಲಿಲ್ಲ. ಅವನ ಉದ್ದೇಶ ಸಂಸ್ಥಾನವನ್ನು ಪುನರ್‌ಸ್ಥಾಪಿಸಿ ನಮ್ಮ ಸಂಸ್ಕೃತಿ ರಕ್ಷಿಸುವುದಾಗಿತ್ತು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠದ ಅಧ್ಯಕ್ಷ ಡಾ.ಎಂ. ಜಯಪ್ಪ ಮಾತನಾಡಿ, ‘ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಪ್ರಮುಖ ಪಾತ್ರ ವಹಿಸಿದೆ. ರಾಯಣ್ಣನಲ್ಲಿ ಸಂಘಟನಾ ಶಕ್ತಿ ತುಂಬಾ ಅದ್ಭುತವಾಗಿತ್ತು. ಆತನ ನಂತರ ಹೋರಾಟ ಮುಂದುವರಿಸಿದರೂ ಸಮರ್ಥ ನಾಯಕತ್ವದ ಕೊರತೆಯಿಂದ ಅದು ವಿಫಲವಾಯಿತು’ ಎಂದರು.

‘ಸಂಗೊಳ್ಳಿಯಲ್ಲಿ ರಾಕ್ ಗಾರ್ಡನ್ ಮಾದರಿಯಲ್ಲಿ ರಾಯಣ್ಣನ ಜೀವನದ 66 ಸನ್ನಿವೇಶಗಳನ್ನು ಒಳಗೊಂಡ ಮಾದರಿಗಳನ್ನು ಕೆತ್ತಲಾಗುತ್ತಿದೆ. ಆ ಕ್ರಾಂತಿವೀರನ ಮಾತೃಭೂಮಿ ಪ್ರೇಮ ಮತ್ತು ಹೋರಾಟ, ತ್ಯಾಗ, ಬಲಿದಾನ ಯುವಕರಿಗೆ ಮಾದರಿ’ ಎಂದು ಹೇಳಿದರು.

ಕನಕ ನೌಕರರ ಸಂಘದ ಅಧ್ಯಕ್ಷ ಅಶೋಕ ಸಾದಲಗಿ ಹಾಗೂ ನಿವೃತ್ತ ಆರ್‌ಎಫ್ಒ ಸಿ.ವೈ. ಅಪ್ಪಣ್ಣ ಇದ್ದರು. ಪೀಠದ ಸಂಯೋಜಕ ಡಾ.ಎಂ.ಎನ್. ರಮೇಶ ಸ್ವಾಗತಿಸಿದರು. ಡಾ.ನಾರಾಯಣ ನಾಯ್ಕ ಪರಿಚಯಿಸಿದರು. ಡಾ.ಮಲ್ಲೇಶ ದೊಡ್ಡಲಕ್ಕಣ್ಣವರ ನಿರೂಪಿಸಿದರು. ಡಾ.ರಾಧಾ ಬಿ.ಆರ್. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.