ADVERTISEMENT

ರೊಟ್ಟಿ ತಟ್ಟಿ ಸ್ವಾವಲಂಬನೆ ಬದುಕು: ಸಂಕ್ರಮಣಕ್ಕೆ ಖಡಕ್‌ ರೊಟ್ಟಿಗಳ ಅಬ್ಬರ

ಬಾಲಶೇಖರ ಬಂದಿ
Published 14 ಜನವರಿ 2026, 1:58 IST
Last Updated 14 ಜನವರಿ 2026, 1:58 IST
ಮೂಡಲಗಿಯ ಜಾನುವಾರು ಪೇಟೆಯಲ್ಲಿರುವ ತಮ್ಮ ಮನೆಯಲ್ಲಿ  ಶಾಂತಾ ಪವಾಡಯ್ಯ ನಿರ್ವಾಣಿ ಹಾಗೂ ತಂಗೆವ್ವ ನಿರ್ವಾಣಿ ಸಜ್ಜೆ ರೊಟ್ಟಿ ಮಾಡುತ್ತಿರುವರು
ಮೂಡಲಗಿಯ ಜಾನುವಾರು ಪೇಟೆಯಲ್ಲಿರುವ ತಮ್ಮ ಮನೆಯಲ್ಲಿ  ಶಾಂತಾ ಪವಾಡಯ್ಯ ನಿರ್ವಾಣಿ ಹಾಗೂ ತಂಗೆವ್ವ ನಿರ್ವಾಣಿ ಸಜ್ಜೆ ರೊಟ್ಟಿ ಮಾಡುತ್ತಿರುವರು   

ಮೂಡಲಗಿ: ಮಕರ ಸಂಕ್ರಾಂತಿ ಹಬ್ಬ ಬರುತ್ತಿದ್ದಂತೆ ಇಲ್ಲಿಯ ಜಾನುವಾರು ಪೇಟೆಯ ಮನೆಗಳಲ್ಲಿ ಪಟಪಟನೆ ಸಜ್ಜೆ ರೊಟ್ಟಿ ಬಡಿಯುವ ಶಬ್ದ ಲಯಬದ್ದವಾಗಿ ಕೇಳಿಬರುತ್ತದೆ. ಇಲ್ಲಿರುವ ಹತ್ತಾರ ಕುಟುಂಬಗಳ ಮಹಿಳೆಯರು ವರ್ಷವಿಡೀ ಜೋಳ, ಗೋವಿನ ಜೋಳ, ಸಜ್ಜೆ ಹೀಗೆ ತರಾವರಿ ಖಡಕ್‌ ರೊಟ್ಟಿ ಮಾಡಿ ಮಾರುವ ಕಾಯಕ ಮಾಡಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಸುತ್ತ ಇಲ್ಲಿ ಸಜ್ಜೆ ರೊಟ್ಟಿಗೇ ಆದ್ಯತೆ.

ಸಂಕ್ರಾಂತಿಯ ಮುನ್ನಾ ದಿನ ಬರುವ ಭೋಗಿ ಹಬ್ಬಕ್ಕೆ ಉತ್ತರ ಕರ್ನಾಟಕದಲ್ಲಿ ವಿಶೇಷ ಖಾದ್ಯವಾಗಿರುವ ಸಜ್ಜೆ ರೊಟ್ಟಿ ಊಟದಲ್ಲಿ ಇರಲೇಬೇಕು. ಹೀಗಾಗಿ ಸಂಕ್ರಮಣ ಹಬ್ಬ ಬರುವ ಒಂದು ವಾರ ಮುಂಚೆ ಇಲ್ಲಿರುವ ಮನೆಗಳಲ್ಲಿ ಹಗಲು ರಾತ್ರಿ ಎನ್ನದೆ ಸಜ್ಜೆ ರೊಟ್ಟಿ ಮಾಡುವುದಕ್ಕೆ ಮಹಿಳೆಯರು ತೊಡಗಿರುತ್ತಾರೆ. ಮನೆ, ಮನೆಗಳಲ್ಲಿ ಸಜ್ಜೆ ರೊಟ್ಟಿಗಳ ಘಮಲು ತುಂಬಿಕೊಂಡಿರುತ್ತದೆ.

‘ಸಂಕ್ರಮಣ ಟೈಮದಾಗ್ರೀ ದಿನಕ್ಕೆ 300ರಿಂದ 350 ರೊಟ್ಟಿ ಬಡಿತ್ತೀವ್ರೀ’ ಎಂದು ಶಾಂತಕ್ಕ ಪವಾಡಯ್ಯ ನಿರ್ವಾಣಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಕೆಲವರು ಮೊದಲೇ 50 ಅಥವಾ 100 ರೊಟ್ಟಿ ಮಾಡಲು ಹೇಳಿರತ್ತಾರ್ರೀ. ಸಂಕ್ರಾಂತಿ ಹಿಂದಿನ ದಿನ ಬಂದು ಒಯ್ಯುತಾರ್ರೀ. ಹಿಂಗಾಗಿ ಮಾಡಿದ್ದ ರೊಟ್ಟಿ ಒಂದೂ ಉಳಿಯೋದಿಲ್ಲರ್ರೀ’ ಎನ್ನುತ್ತಾರೆ ಶಾಂತಕ್ಕ.

ADVERTISEMENT

ವರ್ಷದ ಎಲ್ಲ ದಿನಗಳಲ್ಲಿ ಇಲ್ಲಿ ಖಡಕ್‌ ರೊಟ್ಟಿ ದೊರೆಯುತ್ತವೆ. ಊರಲ್ಲಿ ಕೆಲವು ರೊಟ್ಟಿ ಮಾರಾಟ ಮಾಡುವ ಮಳಿಗೆಗಳು ಸಹ ಇವೆ. ಮದುವೆ, ಸೀಮಂತ, ಹಬ್ಬ ಹರಿದಿನಗಳಂದು ಔತಣ ಕೂಟಕ್ಕೆ ಬೇಕಾದಷ್ಟು ರೊಟ್ಟಿ ಮುಂಚಿತವಾಗಿ ‘ಆರ್ಡ್‌ರ್’ ಕೊಟ್ಟರೆ ಹೇಳಿದ ದಿನಕ್ಕೆ ಗರಿಗರಿಯಾದ ರೊಟ್ಟಿಗಳು ಸಿದ್ದವಾಗಿರುತ್ತವೆ.

‘ತೆಳ್ಳಗೆ, ಎಳ್ಳು ಹಚ್ಚಿ, ಕಟ್ಟಿಗೆ ಒಲೆಯಲ್ಲಿ ಕಾವಲಿ ಮೇಲೆ ಬೇಯಿಸುವುದರಿಂದ ರೊಟ್ಟಿಗಳು ರುಚಿಕಟ್ಟಾಗಿರುತ್ತವೆ’ ಎಂದು ನಿವೃತ್ತ ಪ್ರಾಚಾರ್ಯ ಸಂಗಮೇಶ ಗುಜಗೊಂಡ ರೊಟ್ಟಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೆ ಖಡಕ್‌ ರೊಟ್ಟಿಗಳು ಇಷ್ಟವಾಗುತ್ತವೆ. ಪೌಷ್ಟಿಕಾಂಶ ಇದ್ದು, ಹೃದಯ ಆರೋಗ್ಯಕ್ಕೆ ಸಜ್ಜೆ ಉತ್ತಮ ಎನ್ನುತ್ತಾರೆ. ಸಂಕ್ರಮಣದ ಭೋಗಿ ಊಟದಲ್ಲಿ ಶೇಂಗಾ ಚಟ್ನಿ, ಗುರೆಳ್ಳು, ಅಗಸಿ ಚಟ್ನಿ, ಬೆಳ್ಳುಳ್ಳಿ ಖಾರ ಮತ್ತು ಮೊಸರಿನೊಂದಿಗೆ ಸಜ್ಜೆ ರೊಟ್ಟಿ ‘ಕಟರ್‌ ಕಟರ್‌‘ ಎಂದು ಮೆಲ್ಲುತ್ತಿದ್ದರೆ ರೊಟ್ಟಿ ಎಷ್ಟು ತಿಂದೀವಿ ಎಂದು ಲೆಕ್ಕ ಹತ್ತುವುದಿಲ್ಲ. ಇದು ಉತ್ತರ ಕರ್ನಾಟಕ ಸಜ್ಜೆ ರೊಟ್ಟಿಯ ವಿಶೇಷವಾಗಿದೆ.

ಬೇರೆ ಊರಿನ ಜನರು ರೊಟ್ಟಿ ರುಚಿ ನೋಡಿದರೆ ಸಾಕು ‘ನಮಗೂ 50 ರೊಟ್ಟಿ ಬೇಕ್ರಿ’ ಎಂದು ತಮ್ಮೊಂದಿಗೆ ಒಯ್ಯುವರು. ಇಲ್ಲಿಯ ಕೆಲವು ಕುಟುಂಬದ ಮಕ್ಕಳು ಅಮೆರಿಕ, ಲಂಡನ್‌, ಜರ್ಮನಿ ದೇಶಗಳಲ್ಲಿ ನೌಕರಿಗಾಗಿ ಹೋಗಿದ್ದು, ಇಲ್ಲಿಗೆ ಬಂದು ಮರಳಿ ಹೋಗುವಾಗ ಖಡಕ್‌ ರೊಟ್ಟಿ ತಮ್ಮೊಂದಿಗೆ ಒಯ್ಯುವುದರಿಂದ ಅಮೆರಿಕದಲ್ಲಿಯೂ ಮೂಡಲಗಿ ಸಜ್ಜೆ ರೊಟ್ಟಿಗಳು ಸದ್ದು ಮಾಡುತ್ತವೆ.

‘ಹೊಲಕ್ಕೆ ಕೆಲಸಕ್ಕೆ ಹೋಗೋ ಬದಲು ರೊಟ್ಟಿ ಮಾಡಿತ್ತೀವ್ರೀ. ಇದೇ ನಮ್ಮ ಜೀವನಕ್ಕೆ ಆಸರೆಯಾಗಿದೆ’ ಎನ್ನುವರು ತುಂಗವ್ವ ಮತ್ತು ಕಸ್ತೂರೆವ್ವ ನಿರ್ವಾಣಿ. ಕಳೆದ ಒಂದೂವರೆ ದಶಕದಿಂದ ಇವರು ರೊಟ್ಟಿ ಮಾಡುವ ಕಾಯಕ ಮಾಡಿಕೊಂಡಿದ್ದು, ‘ಸಜ್ಜೆ, ಕಟ್ಟಿಗಿ ಖರ್ಚು ಐತ್ರೀ. ಬೆಂಕಿ ಮುಂದ ಕುಂತ ರೊಟ್ಟಿ ಬಡೆದು ಬೇಯಿಸಬೇಕ್ರೀ. ಒಂದು ರೊಟ್ಟಿಗೆ ₹5 ಇದ್ದು ನೂರು ರೊಟ್ಟಿಗೆ ₹150 ಸಿಗತೈತ್ರೀ’ ಎನ್ನುವ ಶಾಂತಕ್ಕ ಇದರಲ್ಲಿ ಲಾಭಕ್ಕಿಂತ ಸೇವೆ ಐತ್ರಿ ಎನ್ನುವರು.

ಮಕರ ಸಂಕ್ರಾಂತಿ ಅಂಗವಾಗಿ ಬೆಳಗಾವಿಯ ಮಾರುಕಟ್ಟೆಯಲ್ಲಿ ಮಂಗಳವಾರ ಜನ ಸಾಮಗ್ರಿಗಳನ್ನು ಖರೀದಿಸಿದರು  ಪ್ರಜಾವಾಣಿ ಚಿತ್ರ

ಸಂಭ್ರಮದ ಮಕರ ಸಂಕ್ರಮಣಕ್ಕೆ ಸಜ್ಜು

ಬೆಳಗಾವಿ ಜಿಲ್ಲೆಯಲ್ಲಿ ಜ.14 ಹಾಗೂ 15ರಂದು ಜರುಗಲಿರುವ ಮಕರ ಸಂಕ್ರಮಣದ ಸಡಗರ ಜಿಲ್ಲೆಯಲ್ಲಿ ಮನೆ ಮಾಡಿದೆ. ಜಿಲ್ಲಾ ಕೇಂದ್ರ ತಾಲ್ಲೂಕು ಕೇಂದ್ರದ ಮಾರುಕಟ್ಟೆಗಳೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಎಳ್ಳು ಖರೀದಿ ಪೂಜಾ ಸಾಮಗ್ರಿ ಹಾಗೂ ಭೋಜನ ಸಾಮಗ್ರಿಗಳ ಖರೀದಿ ಮಂಗಳವಾರ ಜೋರಾಗಿ ನಡೆಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಮಲಪ್ರಭಾ ಘಟಪ್ರಭಾ ಕೃಷ್ಣಾ ಮತ್ತಿತರ ನದಿಗಳ ತೀರದಲ್ಲಿರುವ ದೇವಸ್ಥಾನಗಳಿಗೆ ಹೋಗಿ ಪುಣ್ಯಸ್ನಾನ ಮಾಡುವುದು ಸೊಗಲ ಸೋಮೇಶ್ವರ ಯಲ್ಲಮ್ಮನ ಗುಡ್ಡ ಮುಂತಾದ ಪ್ರವಾಸಿ ತಾಣಗಳಿಗೆ ಹೋಗಿ ಪೂಜೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಪ್ರವಾಸಿ ತಾಣಗಳು ಜಲಾಶಯಗಳು ಉದ್ಯಾನಗಳು ಐತಿಹಾಸಿಕ ಸ್ಥಳಗಳು ಹಾಗೂ ಹೊಲ– ಗದ್ದೆಗಳಿಗೆ ಬಂಧು– ಮಿತ್ರರೊಂದಿಗೆ ತೆರಳಿ ಬೂರಿ ಭೋಜನ ಸವಿಯಲು ಸಜ್ಜಾಗಿದ್ದಾರೆ. ಮಂಗಳವಾರ ಬೆಳಗಾವಿ ಮಾರುಕಟ್ಟೆಯಲ್ಲಿ ಹೂವು ಹಣ್ಣು ಎಳ್ಳು–ಬೆಲ್ಲ ಪೂಜಾ ಸಾಮಗ್ರಿಗಳು ಮತ್ತು ಆಲಂಕಾರಿಕ ಸಾಮಗ್ರಿಗಳನ್ನು ಜನರು ಖರೀದಿಸಿದರು. ವಿವಿಧ ವಸ್ತುಗಳ ದರ ಏರಿಕೆ ಮಧ್ಯೆಯೂ ಖರೀದಿ ಭರಾಟೆ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.