
ಯಮಕನಮರಡಿ: ಮತಕ್ಷೇತ್ರದ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಅಗತ್ಯವಿರುವಲ್ಲಿ ನೂತನವಾಗಿ 200 ಶಾಲಾ ಕೊಠಡಿಗಳನ್ನು ವೇಗವಾಗಿ ನಿರ್ಮಿಸಲಾಗುತ್ತಿದೆ. ಇದು ದೇಶದಲ್ಲಿ ಯಾರು ಮಾಡದ ಸಾಧನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಶನಿವಾರ ಹುಕ್ಕೇರಿ ತಾಲೂಕಿನ ಸಮೀಪದ ಗುಟಗುದ್ದಿ ಗ್ರಾಮದಲ್ಲಿ ಆರ್.ಎಂ.ಎಸ್.ಎ.ಯೋಜನೆಯಡಿ ನಿರ್ಮಿಸಿದ ನೂತನ ಸರ್ಕಾರಿ ಪ್ರೌಢಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
’ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣವೇ ಮಹತ್ವದ ಅಡಿಗಲ್ಲು ಎಂಬ ನಂಬಿಕೆಯಿಂದ, ನಮ್ಮ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ. ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ. ನಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಇಂತಹ ಅಭಿವೃದ್ಧಿ ಕಾರ್ಯಗಳು ಸದಾ ನೆರವಾಗಲಿ ಎಂಬ ಆಶಯ ಇಟ್ಟುಕೊಂಡಿದ್ದೇನೆ ಎಂದರು.
ಅರಣ್ಯ ಇಲಾಖೆ ಸ್ಥಳ ಪಡೆದು ಈ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ಈ ಗ್ರಾಮದಲ್ಲೇ ಮುಂದಿನ ದಿನಗಳಲ್ಲಿ ಪಿಯು ಕಾಲೇಜು, ಡಿಗ್ರಿ ಕಾಲೇಜು ಕೂಡ ನಿರ್ಮಿಸೋಣ. ಈ ಶಾಲೆಗೆ ಬೇಕಾದ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ದ್ರಾಕ್ಷಾಯಿಣಿ ಪಾಟೀಟ, ಬಸವಣ್ಣಿ ಮೂಕನವರ, ಬಸವರಾಜ ಪೂಜಾರಿ, ಬಸು ಪೂಜಾರಿ, ಯಲ್ಲವ್ವ ಹರಿಜನ, ರೇಣುಕಾ ತವಗಿ ಮತ್ತು ಮುಖ್ಯೋಪಾಧ್ಯಾಯ ಶ್ರೀಶೈಲ ಹಿರೇಮಠ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.