
ಕೊಲೆಗೀಡಾದ ಕಾಶವ್ವ ಕರೀಕಟ್ಟಿ.
ಸವದತ್ತಿ (ಬೆಳಗಾವಿ ಜಿಲ್ಲೆ): ಮಹಿಳೆಯೊಬ್ಬರನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಅ.13 ರಂದು ಇಲ್ಲಿನ ರಾಮಾಪೂರ ಸೈಟ ಬಡಾವಣೆಯ ಹೂಲಿ ಅಜ್ಜನ ಮಠದ ಹತ್ತಿರ ನಡೆದಿದೆ. ಮೃತ ದೇಹದ ದುರ್ನಾತದಿಂದ ಈ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಕೆಎಸ್‌ಆರ್‌ಟಿಸಿಯಲ್ಲಿ ನಿರ್ವಾಹಕಿಯಾಗಿ ಕರ್ತವ್ಯದಲ್ಲಿದ್ದ ಕಾಶವ್ವ ಕರೀಕಟ್ಟಿ (34) ಕೊಲೆಯಾದ ಮಹಿಳೆ. ನಿಪ್ಪಾಣಿ ಠಾಣೆಯ ಕಾನ್‌ಸ್ಟೆಬಲ್ ಸಂತೋಷ ಕಾಂಬಳೆ (35) ಕೊಲೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಬೈಲಹೊಂಗಲ ತಾಲ್ಲೂಕಿನ ಬೆಳವಡಿ ಗ್ರಾಮದ ಕಾಶವ್ವ ಹಾಗೂ ನಿಪ್ಪಾಣಿಯ ಕಾನ್‌ಸ್ಟೆಬಲ್ ಸಂತೋಷ ಕಾಂಬಳೆ ಇಬ್ಬರು ಪ್ರೀತಿಸಿ 2013ರಲ್ಲಿ ವಿವಾಹವಾಗಿದ್ದರು. ವರಿಗೆ 11 ವರ್ಷದ ಪುತ್ರ ಇದ್ದಾನೆ.
ನಿಪ್ಪಾಣಿಯಲ್ಲಿಯೇ ಪತಿ, ಪತ್ನಿಯರ ಮಧ್ಯೆ ಕಲಹ ನಡೆದಿತ್ತು. ಇದರಿಂದ ಬೇಸತ್ತ ಪತ್ನಿ ಕಾಶವ್ವ ಸವದತ್ತಿ ಡಿಪೊಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಸವದತ್ತಿಗೂ ಬಂದ ಸಂತೋಷ ಪತ್ನಿಯನ್ನು ಸತಾಯಿಸುತ್ತಿದ್ದ. ಈ ಕುರಿತು ಪತ್ನಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಬಳಿಕ ಸಂತೋಷನನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿತ್ತು.
ಜೊತೆಗೆ ಪತ್ನಿ ಇತ್ತೀಚಿಗೆ ಪತಿಯಿಂದ ವಿವಾಹ ವಿಚ್ಛೇದನ ಪಡೆದಿದ್ದಳು. ಆದಾಗ್ಯೂ ಇಬ್ಬರೂ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ಅ. 13 ರಂದು ಪತ್ನಿ ಮನೆಗೆ ಬಂದು ಜಗಳವಾಡಿದ ಸಂತೋಷ, ಮಾರಕಾಸ್ತ್ರದಿಂದ ಹೊಟ್ಟೆ, ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ. ಈ ವಿಷಯ ಬಹಿರಂಗವಾಗದಿರಲೆಂದು ಮನೆಗೆ ಬೀಗ ಹಾಕಿ ಹೋಗಿದ್ದನು.
ಸೇವೆಗೆ ಬಾರದ ಕಾಶವ್ವ ಅವರನ್ನು ಕಾಣಲು ಸಹೋದ್ಯೋಗಿಗಳು ಹಾಗೂ ಸಂಬಂಧಿಕರು ಗುರುವಾರ ರಾತ್ರಿ ಮನೆಗೆ ಬಂದಾಗ ದುರ್ನಾತ ಬಂದಿದ್ದರಿಂಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಠಾಣೆಗೆ ಕರೆ ತಂದು, ತನಿಖೆ ಮುಂದುವರೆಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.