ಸವದತ್ತಿ: ಕಳೆದ ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ. ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಹಳ್ಳಗಳಿಂದ ರಸ್ತೆಗಳು ಜಲಾವೃತಗೊಂಡಿವೆ. ಹಲವೆಡೆ ಮನೆಗೋಡೆಗಳು ಕುಸಿದು ಹಾನಿಗೀಡಾಗಿವೆ.
ಹಿಟ್ಟಣಗಿ ಗ್ರಾಮದ ಆರೇಳು ಮನೆಗಳಿಗೆ ನೀರು ನುಗ್ಗಿದೆ. ಕೆಲವು ಮನೆಗಳು ಸೋರುತ್ತಿದ್ದು, ವಾಸ್ತವ್ಯಕ್ಕೆ ಯೋಗ್ಯವಿಲ್ಲದಾಗಿದೆ. ತಾಲ್ಲೂಕಾಡಳಿತ ಸರ್ಕಾರಿ ಕನ್ನಡ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ.
ಹೂಳು ತುಂಬಿದ ಹಳ್ಳದ ನೀರು ಸರಾಗ ಹರಿಯಲು ಸಾಧ್ಯವಾಗದೇ ಹೊಸೂರು–ಮುರಗೋಡ, ಬೈಲಹೊಂಗಲ-ಮುನವಳ್ಳಿ ರಸ್ತೆಗಳು ಜಲಾವೃತಗೊಂಡು ಸಂಚಾರ ಕೆಲಕಾಲ ಸ್ಥಗಿತಗೊಂಡ ಘಟನೆಗಳು ನಡೆದಿವೆ.
ಸವದತ್ತಿ ಭಾಗದಲ್ಲಿ 21.4 ಮಿ.ಮೀ, ನವಿಲುತೀರ್ಥ ಭಾಗದಲ್ಲಿ 90.4 ಮಿ.ಮೀ, ಮುರಗೋಡದಲ್ಲಿ 70.2 ಮಿ.ಮೀ, ಹೂಲಿಕಟ್ಟಿಯಲ್ಲಿ 17.2 ಮಿ.ಮೀ ಹಾಗೂ ಯರಗಟ್ಟಿ 69 ಮಿ.ಮೀ ನಷ್ಟು ಸೇರಿ ಒಟ್ಟು ತಾಲ್ಲೂಕಿನಾದ್ಯಂತ ಸರಾಸರಿ 53.64 ಮಿ.ಮೀ ನಷ್ಟು ಮಳೆ ವರದಿಯಾಗಿದೆ. ದನವಿಡೀ ಸುರಿದ ಮಳೆಗೆ ಚುಳಕಿ, ಬೆಟಸೂರು ಗ್ರಾಮಗಳಲ್ಲಿ ಮನೆಗಳು ಧರೆಗುರುಳಿವೆ. ಬೆಟಸೂರ ಗ್ರಾಮದ ಬಸವರಾಜ ಈರಪ್ಪ ಮೊಖಾಶಿ ಅವರ ಮನೆ ಕುಸಿತದಿಂದ ಗಾಯಗಳಾಗಿದ್ದು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸತತ ಮಳೆಯಿಂದ ಭರ್ತಿಯಾಗಿರುವ ಮಲಪ್ರಭಾ ಅಣೆಕಟ್ಟಿನಿಂದ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೊಳಿಸಲಾಗಿದೆ. ನದಿ ಪಾತ್ರದ ಜನತೆಗೆ ಕಟ್ಟೆಚ್ಚರವಿರಿಸಲಾಗಿದೆ. ನವರಾತ್ರಿ ಉತ್ಸವದಲ್ಲಿ ಭಾಗಿಯಾಗಲು ತಾಲ್ಲೂಕಿನ ಯಲ್ಲಮ್ಮ ದೇವಸ್ಥಾನಕ್ಕೆ ಬೃಹತ್ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಳೆಯನ್ನೂ ಲೆಕ್ಕಿಸದೇ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಮುನವಳ್ಳಿ– ಬೈಲಗಹೊಂಗಲ ಮಾರ್ಗದಲ್ಲಿ ಹೊಸೂರ ಗ್ರಾಮದ ಬಳಿಯಿರುವ ಸಣ್ಣ ಬ್ರಿಜ್ ಜಲಾವೃತಗೊಂಡಿದೆ. ಸುಮಾರು 20ಕ್ಕೂ ಅಧಿಕ ಮನೆಗಳು ಧರೆಗುರುಳಿವೆ. ಹಿಟ್ಟಣಗಿ ಗ್ರಾಮದಲ್ಲಿ ತಾತ್ಕಾಲಿಕ ಕಾಳಜಿ ಕೇಂದ್ರ ತೆರೆಯಲಾಗಿದೆ.ಎಂ.ಎನ್. ಹೆಗ್ಗನ್ನವರ. ತಹಶೀಲ್ದಾರ್ ಸವದತ್ತಿ
ನಿರಂತರ ಮಳೆಗೆ ಹೊಲಗದ್ದೆಗಳಿಗೆ ಸಂಪರ್ಕಿಸುವ ರಸ್ತೆಗಳು ಸಂಚರಿಸಲು ಬಾರದಂತಾಗಿವೆ. ಹತ್ತಿ ಸೋಯಾಬಿನ್ ಉದ್ದು ಗೋವಿನಜೋಳ ಉಳ್ಳಾಗಡ್ಡಿ ಸೇರಿ ಇತರೆ ಬೆಳೆಗಳಿರುವ ಜಮೀನುಗಳು ಜಲಾವೃತವಾಗೊಂಡು ಹಾನಿಗೀಡಾಗಿವೆಸುರೇಶ ಸಂಪಗಾವಿ ತಾಲ್ಲೂಕು ಘಟಕದ ಅಧ್ಯಕ್ಷ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.