
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಪೋಷಕರ ಸಮಾವೇಶದಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡರು
ಬೆಳಗಾವಿ: ‘ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರ, ಬಡ ಮಕ್ಕಳನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಶಿಕ್ಷಣ ಸಚಿವರು ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ’ ಎಂದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ದೂರಿದರು.
ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ನೀತಿ ವಿರೋಧಿಸಿ, ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್ಒ) ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪೋಷಕರ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಈಗ ಗಡಿನಾಡು ಬೆಳಗಾವಿಯಲ್ಲಿ ಕನ್ನಡಿಗರು, ಮರಾಠಿಗರು ಒಂದಾಗಿ, ತಮ್ಮೂರಿನ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ. ರಾಜ್ಯದ ಮೂಲೆಮೂಲೆಗೂ ಈ ಹೋರಾಟ ಹಬ್ಬಬೇಕಿದೆ’ ಎಂದು ಕರೆ ನೀಡಿದರು.
ಎಐಡಿಎಸ್‌ಒ ಖಜಾಂಚಿ ಸುಭಾಷ ಬೆಟ್ಟದಕೊಪ್ಪ, ‘ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಇಲ್ಲ ಎಂದು ಸರ್ಕಾರ ಹೇಳುತ್ತಿರುವುದು ಶುದ್ಧಸುಳ್ಳು. ರಾಜ್ಯದಲ್ಲಿ 37 ಲಕ್ಷ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಆದರೆ, ಸರ್ಕಾರದ ನಿರ್ಲಕ್ಷ್ಯದಿಂದ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಬಳ್ಳಾರಿಯಲ್ಲಿ ಈಚೆಗೆ ಶಾಲೆ ಕಟ್ಟಡ ಕುಸಿದು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ 21 ಸಾವಿರ ಸರ್ಕಾರಿ ಶಾಲೆ ಕಟ್ಟಡಗಳು ಹಲವು ವರ್ಷಗಳಿಂದ ದುರಸ್ತಿ ಕಂಡಿಲ್ಲ. 60 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆ ಖಾಲಿ ಇವೆ. ಈ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು, ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಗ್ರಾಮೀಣ ಭಾಗದ ಶಾಲೆಗಳನ್ನು ಮುಚ್ಚಲು ಹೊರಟಿದೆ. ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ಪಕ್ಷದವರೂ ಈ ನೀತಿ ವಿರುದ್ಧ ಗಟ್ಟಿಯಾಗಿ ಹೋರಾಟ ಮಾಡಬೇಕಿದೆ’ ಎಂದು ಕರೆ ನೀಡಿದರು.
ನಾಟಕಕಾರ ಡಿ.ಎಸ್.ಚೌಗಲೆ, ‘ಇದು ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸುವ, ಬಡವರನ್ನು ಕಡು ಬಡತನಕ್ಕೆ ತಳ್ಳುವ ಸ್ಪಷ್ಟ ವರ್ಗೀಕರಣದ ಯೋಜನೆ. ಸರ್ಕಾರ ಇದನ್ನು ಕೈಬಿಟ್ಟು, ಹಳ್ಳಿ ಶಾಲೆಗಳನ್ನು ಉನ್ನತೀಕರಿಸಬೇಕು. ಕನ್ನಡ ಶಾಲೆಗಳು ಉಳಿದರಷ್ಟೇ ಸಾಹಿತಿಗಳು ಮತ್ತು ನಾಟಕಕಾರರು ಜನರಿಗೆ ತಲುಪುತ್ತಾರೆ. ಎಲ್ಲ ಸಾಹಿತಿಗಳು ಹೋರಾಟಕ್ಕೆ ಧ್ವನಿಗೂಡಿಸಬೇಕು’ ಎಂದು ಕೋರಿದರು.
ಎಐಡಿಎಸ್ಒ ರಾಜ್ಯ ಸಮಿತಿ ಸದಸ್ಯೆ ತುಳಜಾರಾಮ್ ಎನ್.ಕೆ., ‘ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡಬಾರದು’ ಎಂದರು.
ಎಐಡಿಎಸ್ಒ ಜಿಲ್ಲಾ ಘಟಕದ ಸಂಚಾಲಕ ಮಹಾಂತೇಶ ಬಿಳೂರ್ ಅಧ್ಯಕ್ಷತೆ ವಹಿಸಿದ್ದರು. ಸತೀಶ ಶಹಾಪುರಕರ, ನಾಮದೇವ ತಳವಾರ, ದಶರಥ ಧಾಮಣೇಕರ, ಆನಂದ ದೇಸಾಯಿ, ಭರಮಪ್ಪ ಕಾಲೇರಿ, ಮಾಳಿಂಗರಾಯ ಶಹಾಪುರಕರ, ಮಹಾದೇವಿ ತಳವಾರ, ರವಿ ಲೋಹಾರ ಇತರರಿದ್ದರು. ಸಮಾವೇಶದಲ್ಲಿ ಉತ್ಸಾಹದಿಂದ ಪಾಲ್ಗೊಂಡ ವಿವಿಧ ಗ್ರಾಮಸ್ಥರು, ‘ಬೆಳಗಾವಿಯಲ್ಲಿ ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ’ ಎಂಬ ಪ್ರತಿಜ್ಞೆ ಮಾಡಿದರು.
ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಬೇಕಾದರೆ ಸರ್ಕಾರಿ ಶಾಲೆ ನಮ್ಮೂರಿನಲ್ಲೇ ಇರಬೇಕು. ಕನ್ನಡ ಮರಾಠಿ ಉರ್ದು ಭಾಷಿಕರೆಲ್ಲರೂ ಒಟ್ಟಾಗಿ ಹೋರಾಟ ಮಾಡೋಣಕಲ್ಲಪ್ಪ ಪಾಟೀಲ ಅಧ್ಯಕ್ಷ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಬಳಗಾಮಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.