ADVERTISEMENT

ಒಳಮೀಸಲಾತಿಗಾಗಿ ಒಗ್ಗಟ್ಟಾಗಿ ಒತ್ತಾಯಿಸಿ: ಸರ್ದಾರ್ ಸೇವಾಲಾಲ್ ಸ್ವಾಮೀಜಿ

ಸಂತ ಸೇವಾಲಾಲ್‌ ಮಹಾರಾಜರ ಜಯಂತಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 8:33 IST
Last Updated 23 ಫೆಬ್ರುವರಿ 2026, 8:33 IST
ಬೆಳಗಾವಿಯಲ್ಲಿ ಭಾನುವಾರ ಸಂತ ಸೇವಾಲಾಲ್‌ ಮಹಾರಾಜರ ಜಯಂತಿ ಅಂಗವಾಗಿ ನಡೆದ ಮೆರವಣಿಗೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪೂಜೆ ಸಲ್ಲಿಸಿ ಚಾಲನೆ ನೀಡಿದರು 
ಬೆಳಗಾವಿಯಲ್ಲಿ ಭಾನುವಾರ ಸಂತ ಸೇವಾಲಾಲ್‌ ಮಹಾರಾಜರ ಜಯಂತಿ ಅಂಗವಾಗಿ ನಡೆದ ಮೆರವಣಿಗೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪೂಜೆ ಸಲ್ಲಿಸಿ ಚಾಲನೆ ನೀಡಿದರು    

ಬೆಳಗಾವಿ: ‘ಬಂಜಾರ ಸಮಾಜ ಹೃದಯದಿಂದ ಸಾಕಷ್ಟು ಶ್ರೀಮಂತಿಕೆ ಹೊಂದಿದೆ. ಆದರೆ, ಜನ ಬಡವರಾಗಿದ್ದಾರೆ. ಸಮುದಾಯದವರು ಒಗ್ಗಟ್ಟಾಗಿ ಒಳಮೀಸಲಾತಿ ವಿಚಾರದ ಕುರಿತು ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಚಿತ್ರದುರ್ಗದ ಬಂಜಾರ ಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಭಾನುವಾರ ನಡೆದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಉತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

‘ಸೇವಾಲಾಲ್ ಮಹಾರಾಜರು ತಮ್ಮ ಕಾಲಘಟ್ಟದಲ್ಲಿ ಎಲ್ಲರಿಗೂ ಒಳಿತನ್ನೇ ಬಯಸಿದರು. ಅವರ ತತ್ವಾದರ್ಶಗಳು ಸಾರ್ವಕಾಲಿಕವಾಗಿವೆ’ ಎಂದರು.

ADVERTISEMENT

ಉಪನ್ಯಾಸ ನೀಡಿದ ನಿವೃತ್ತ ಮುಖ್ಯ ಶಿಕ್ಷಕ ಪಿ.ಬಿ. ಲಮಾಣಿ, ‘ಸಂತ ಸೇವಾಲಾಲ್ ಮಹಾರಾಜರನ್ನು ಬಂಜಾರಾ ಸಮುದಾಯದ ಪ್ರಮುಖ ಗುರು, ಸಾಮಾಜಿಕ ಸುಧಾರಕ ಮತ್ತು ಶಾಂತಿಪರ ಚಿಂತಕ ಎಂದು ಪರಿಗಣಿಸಲಾಗುತ್ತದೆ. ಜೀವನದುದ್ದಕ್ಕೂ ಅವರು ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದರು’ ಎಂದರು.

ಮಾಜಿ ಶಾಸಕ ಪಿ.ರಾಜೀವ್‌ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ಬಂಜಾರ ಸಮಾಜದ ಮುಖಂಡರು ವೇದಕೆ ಮೇಲಿದ್ದರು.

ಇದಕ್ಕೂ ಮುನ್ನ ನಗರದ ಕೋಟೆ ಕೆರೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸಂತ ಸೇವಾಲಾಲ್ ಮಹಾರಾಜರ ಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಮಾರ್ಗದುದ್ದಕ್ಕೂ ಸೇವಾಲಾಲರ ಸ್ತುತಿಗೀತೆ, ಬಂಜಾರ ಸಮಾಜದ ಜನಪದ ಗೀತೆಗಳ ಗಾಯನ ನಡೆಯಿತು. ಯುವಜನರು ಕುಣಿದು ಸಂಭ್ರಮಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಲಕ್ಷ್ಮೀ ಮಹಾದೇವ ರಾಥೋಡ, ಸುರೇಶ ರಾಥೋಡ, ದೇವೇಂದ್ರ ನಾಯ್ಕ, ಸೋಮಪ್ಪ ಕಾರಬಾರಿ, ಕಾಂತೇಶ್ ರಾಥೋಡ, ಅಶೋಕ ಪೂಜಾರಿ, ವಿಷ್ಣು ಲಮಾಣಿ, ಪಾಂಡುರಂಗ ನಾಯ್ಕ ಇದ್ದರು.

ಬಂಜಾರ ಸಮುದಾಯ ಆಚಾರ ವಿಚಾರ ಸಂಸ್ಕೃತಿ ಹೊಂದಿದೆ. ಆದರೂ ವಲಸೆ ತಪ್ಪಿಲ್ಲ. ಸಮಾಜದ ಅಭಿವೃದ್ಧಿಗೆ ನಿರಂತರ ಚರ್ಚೆಯಾಗಬೇಕು
- ಪಿ.ರಾಜೀವ್‌, ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.