
ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ರಾಜ್ಯ ಸಮಿತಿ ನೇತೃತ್ವದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ‘ಬೆಳಗಾವಿ ಚಲೋ’ ನಡೆಸಿದರು. ಸುವರ್ಣ ವಿಧಾನಸೌಧಕ್ಕೆ ತೆರಳುವ ಇಲ್ಲಿನ ಪಿ.ಬಿ.ರಸ್ತೆಯಲ್ಲಿ ಧರಣಿ ನಡೆಸಿದರು.
ಐಟಿಐ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಠಿ ಮಾಡಬೇಕು. ಯಾವುದೇ ವಿಭಾಗದ ವಿದ್ಯಾರ್ಥಿಗಳಿಗೆ ಮೂರು ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡಿಲ್ಲ. ಕೂಡಲೇ ಬಿಡುಗಡೆ ಮಾಡಬೇಕು. ವಿದ್ಯಾರ್ಥಿನಿಯರಿಗೆ ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲ. ದೌರ್ಜನ್ಯ, ಕೊಲೆ, ಲೈಂಗಿಕ ಕಿರುಕುಳ, ಘೋಷಣೆಗಳನ್ನು ತಡೆಗಟ್ಟುವಂತೆ ಆಗ್ರಹಿಸಿ, ಹಾಸ್ಟೆಲ್, ಶಾಲಾ ಕಾಲೇಜುಗಳಲ್ಲಿ ನಡೆಯುವ ಒಟ್ಟಾರೆ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಭಾರಿ ಭ್ರಷ್ಟಾಚಾರದ ಹಗರಣಗಳು ಕುರಿತು ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿ ಹಾಸ್ಟೆಲ್ ವಿದ್ಯಾರ್ಥಿಗೆ ಆಹಾರ ಭತ್ಯೆಯನ್ನು ₹1,750ರಿಂದ ₹1,850 ನಿಗದಿ ಮಾಡಲಾಗಿದೆ. ಪ್ರಸ್ತುತ ಬೆಲೆ ಏರಿಕೆಯಿಂದ ವಿದ್ಯಾರ್ಥಿಗಳಿಗೆ ಬೇಕಾಗಿರುವ ಪೌಷ್ಟಿಕಾಂಶ ಸಿಗದೇ ಅನಾರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆರೋಗ್ಯ ಭದ್ರತೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸಿದರೆ 2.5 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ನೀಡಲಾಗುತ್ತಿದೆ. ಆದ್ದರಿಂದ ಹಾಸ್ಟೆಲ್‌ಗೆ ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದೂ ಮನವಿ ಮಾಡಿದರು.
ರಾಜ್ಯದ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಸುಮಾರು 62 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಹಾಗೂ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸಾವಿರಾರು ಉಪನ್ಯಾಸಕ, ಸಹಾಯಕ ಪ್ರಾಧ್ಯಾಪಕರು, ಪ್ರಾಧ್ಯಾಪಕರ ಹುದ್ದೆಗಳು ಸೇರಿದಂತೆ ಒಟ್ಟಾರೆ ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಕೂಡಲೇ ಭರ್ತಿ ಮಾಡಬೇಕು ಎಂದೂ ಕೋರಿದರು.
ಎಸ್ಎಫ್ಐ ರಾಜ್ಯ ಘಟಕದ ಅಧ್ಯಕ್ಷ ಶಿವಪ್ಪ ಅಂಬ್ಲಿಕಲ್, ಕಾರ್ಯದರ್ಶಿ ಟಿ.ಎಸ್.ವಿಜಯಕುಮಾರ್, ಕೇಂದ್ರ ಸಮಿತಿ ಸದಸ್ಯೆ ವೈ.ಸುಜಾತಾ, ಉಪಾಧ್ಯಕ್ಷ ಎಸ್.ಬಸವರಾಜ, ಗಣೇಶ ರಾಠೋಡ್, ಬಸವರಾಜ ಗುಳೆದಾಳು, ಸಿಐಟಿಯು ಅಧ್ಯಕ್ಷೆ ವನಂದನ, ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.
ಬೆಳಗಾವಿಯಲ್ಲಿ ಉರ್ದು ಭವನ ನಿರ್ಮಿಸುವಂತೆ ಉರ್ದು ಘರ ಕಮಿಟಿ ವತಿಯಿಂದ ಶುಕ್ರವಾರ ಸುವರ್ಣ ವಿಧಾನಸೌಧದ ಸುವರ್ಣ ಗಾರ್ಡನ್ ಬಳಿಯ ಪ್ರತಿಭಟನೆ ನಡೆಸಲಾಯಿತು. ಸುಮಾರು 20 ವರ್ಷಗಳಿಂದ ಬೆಳಗಾವಿಯಲ್ಲಿ ಉರ್ದು ಭವನ ನಿರ್ಮಿಸಬೇಕು ಎಂಬುವುದು ಇಲ್ಲಿನ ಉರ್ದು ಭಾಷಿಕರ ಬಹುದಿನ ಬೇಡಿಕೆಯಾಗಿದೆ. ಯಾವುದೇ ಸರ್ಕಾರವು ಸಕಾರಾತ್ಮಕ ಪ್ರತಿಕ್ರಿಯಿಸುತ್ತಿಲ್ಲ. ಕಳೆದ ಒಂದು ವರ್ಷದಿಂದ ಇಲ್ಲಿನ ಉರ್ದು ಫರ್ ಕಮಿಟಿ ಸದಸ್ಯರು ಸುಭಾಷ ನಗರದಲ್ಲಿ ಒಂದು ಬಾಡಿಗೆ ಮನೆ ತೆಗೆದುಕೊಂಡು ಉರ್ದು ಗ್ರಂಥಾಲಯ ಉಚಿತ ಉರ್ದು ಕಂಪ್ಯೂಟರ್ ತರಬೇತಿ ಕೇಂದ್ರ ಹಾಗೂ ಉರ್ದು ಕಲಿಕಾ ಕೇಂದ್ರ ನಡೆಸುತ್ತಿದ್ದೇವೆ. ಇದಕ್ಕೆ ಪ್ರತಿ ತಿಂಗಳು ಎಲ್ಲ ಸದಸ್ಯರು ಜೇಬಿನಿಂದ ಹಣ ಖರ್ಚು ಮಾಡುತ್ತಿದ್ದಾರೆ. ಉರ್ದು ಭವನ ನಿರ್ಮಾಣವಾದರೆ ಉರ್ದು ಭಾಷಿಕರಿಗೆ ಅನುಕೂಲವಾಗಲಿದೆ ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಶರೀಫ್ ಅಹ್ಮದ್ ಆರೀಫ್ ಕಟಗೇರಿ ಅಬ್ದುಲ್ ಖಾದರ್ ಖಾಜಿ ಮೊಯಿನ್ ದಫೇದಾರ ಮುದಸ್ಸರ್ ಭಾಗವಾಗ ಬಾಬಾಜಾಮ ಖಾನ್ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.