ADVERTISEMENT

‘ಪರಿಸ್ಥಿತಿ ಕೈ ಮೀರಿದರೆ ನಿರ್ವಹಣೆಗೆ ಸಜ್ಜಾಗಿ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 14:29 IST
Last Updated 20 ಏಪ್ರಿಲ್ 2021, 14:29 IST

ಚಿಕ್ಕೋಡಿ: ‘ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೊರೊನಾ ವೈರಾಣು ಹರಡುವಿಕೆ ನಿಯಂತ್ರಣದಲ್ಲಿದ್ದು, ಉಲ್ಬಣಗೊಳ್ಳದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಒಂದೊಮ್ಮೆ ಪರಿಸ್ಥಿತಿ ಕೈಮೀರಿದರೆ ಪರಿಣಾಮಕಾರಿ ನಿರ್ವಹಣೆಗೆ ಸಜ್ಜಾಗಿರಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಮಿನಿವಿಧಾನಸೌಧದಲ್ಲಿ ಮಂಗಳವಾರ ನಡೆದ ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಚಿಕ್ಕೋಡಿ, ಅಥಣಿ, ರಾಯಬಾಗ, ನಿಪ್ಪಾಣಿ ಹಾಗೂ ಹುಕ್ಕೇರಿ ತಾಲ್ಲೂಕು ಕೇಂದ್ರಗಳಲ್ಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಅಗತ್ಯ ಉಪಕರಣಗಳೊಂದಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಅಲ್ಲದೆ ಐಎಂಎ ವೈದ್ಯರ ಸಹಯೋಗದಲ್ಲಿ ಸುಸಜ್ಜಿತವಾದ ಕೋವಿಡ್ ಸೆಂಟರ್‌ಗಳನ್ನು ತೆರೆಯಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸದ ಅಣ್ಣಾಸಾಹೇಬ ಜೊಲ್ಲೆ, ‘ಕೋವಿಡ್ ಲಸಿಕೆ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ರೋಗಿಗಳ ಅನುಕೂಲಕ್ಕಾಗಿ ನೋಡಲ್ ಅಧಿಕಾರಿ ನೇಮಿಸಿ ಸೂಕ್ತ ಮಾಹಿತಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಚಿಕಿತ್ಸೆಗಾಗಿ ಖಾಸಗಿ ವೈದ್ಯರ ನೆರವು ಪಡೆಯಬೇಕು’ ಎಂದು ಸೂಚಿಸಿದರು.

ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ‘ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡದೆ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಉಪ ವಿಭಾಗಾಧಿಕಾರಿ ಯುಕೇಶಕುಮಾರ ಮತ್ತು ಡಿವೈಎಸ್ಪಿ ಮನೋಜ ನಾಯಿಕ, ಎಡಿಎಚ್‌ಒ ಡಾ.ಎಸ್.ಎಸ್. ಗಡಾದ, ಐಎಂಎ ಅಧ್ಯಕ್ಷೆ ಡಾ.ರೋಹಿಣಿ ಕುಲಕರ್ಣಿ, ಡಾ.ರಾಜೇಂದ್ರ ಸಲಗರಡ, ಡಾ.ಶ್ರೀಧರ ಕುಲಕರ್ಣಿ, ಡಾ.ದೇವಿಕಾ ಭಾತೆ, ಶಾಂಭವಿ ಅಶ್ವಥಪೂರ, ಶಕುಂತಲಾ ಡೋಣವಾಡೆ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಸಂತೋಷ ಟವಳೆ, ನಾಗರಾಜ ಮೇದಾರ, ಬಾಬು ಮಿರ್ಜೆ, ವಿಶ್ವನಾಥ ಕಾಮಗೌಡ, ಸಂಜಯ ಅರಗೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.