ADVERTISEMENT

ಕಿತ್ತುತಿನ್ನುವ ಬಡತನದಲ್ಲಿಯೂ ಪಿಯುಸಿಯಲ್ಲಿ ಶೇ.91 ಅಂಕಗಳಿಸಿದ ವಿದ್ಯಾರ್ಥಿನಿ

ಮುಂದಿನ ಓದಿಗೆ ದೊರೆತ ನೆರವು

ಪರಶುರಾಮ ನಂದೇಶ್ವರ
Published 24 ಏಪ್ರಿಲ್ 2019, 13:28 IST
Last Updated 24 ಏಪ್ರಿಲ್ 2019, 13:28 IST
ತಂದೆ ಸಿದರಾಯ ಅವರೊಂದಿಗೆ ದಾನೇಶ್ವರಿ ಮಟಗಾರ
ತಂದೆ ಸಿದರಾಯ ಅವರೊಂದಿಗೆ ದಾನೇಶ್ವರಿ ಮಟಗಾರ   

ಅಥಣಿ: ಇಲ್ಲೊಬ್ಬ ವಿದ್ಯಾರ್ಥಿನಿ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ನಿತ್ಯ 18 ಕಿ.ಮೀ.ಕಾಲ್ನಡಿಗೆಯಲ್ಲಿ ಸಂಚರಿಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನೂ ಮಾಡಿದ್ದಾಳೆ.

ತಾಲ್ಲೂಕಿನ ಬರಮಖೋಡಿ ಗ್ರಾಮದ ದಾನೇಶ್ವರಿ ಸಿದರಾಯ ಮಟಗಾರ ನಿತ್ಯ ಕಾಲೇಜಿಗೆ ಕಾಲ್ನಡಿಗೆಯಲ್ಲಿ ಹೋಗಿ ಬರುತ್ತಿದ್ದರು. ವಿದ್ಯಾರ್ಥಿನಿ ಪಿಯು ಕಲಾ ವಿಭಾಗದಲ್ಲಿ ಶೇ 91.50 (549–600) ಅಂಕ ಗಳಿಸುವ ಮೂಲಕ ಪಾಲಕರು ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.

ಕಾಲ್ನಡಿಗೆಯಲ್ಲಿ ಕಾಲೇಜಿಗೆ: ಇವರ ಮನೆ ಬರಮಖೋಡಿ ಗ್ರಾಮದ ಹೊರವಲಯದಲ್ಲಿನ ತೋಟದಲ್ಲಿರುವುದರಿಂದ ಇಲ್ಲಿ ಬಸ್ಸಿನ ಸೌಕರ್ಯವಿರಲಿಲ್ಲ. ಗುಡ್ಡದಲ್ಲಿನ ನಡುದಾರಿಯಿಂದ 9 ಕಿ.ಮೀ. ಅಂತರದಲ್ಲಿ ಅಥಣಿ ಪಟ್ಟಣವಿದೆ. ಹೀಗಾಗಿ, ವಿದ್ಯಾರ್ಥಿನಿ ನಿತ್ಯ ನಡೆದು ಹೋಗುತ್ತಿದ್ದಳು.

ADVERTISEMENT

ಬಡತನದ ಮಧ್ಯೆಯೂ ಸಾಧನೆ: ಅಥಣಿ ಪಟ್ಟಣದ ಹೊರವಲಯ ದಲ್ಲಿರುವ ಸಂತರಾಮ ಪದವಿಪೂರ್ವ ಕಾಲೇಜಿನಲ್ಲಿ ದಾನೇಶ್ವರಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮನೆಯಲ್ಲಿ ಬಡತನವಿದ್ದರೂ ಶೃದ್ಧೆ ಹಾಗೂ ಧೈರ್ಯ ದಿಂದ ವಿದ್ಯಾಭ್ಯಾದಲ್ಲಿ ತೊಡಗಿ ಸಾಧಿಸಿದ್ದಾರೆ.

ತಂದೆ ಸಿದರಾಯ ಅನಕ್ಷರಸ್ಥ ರಾಗಿದ್ದು, ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಕುಟುಂಬದಲ್ಲಿ 5 ಜನ ಸದಸ್ಯರಿದ್ದು, ಇವರ ಆದಾಯದ ಮೇಲೆಯೇ ಅವಲಂಭಿತವಾಗಿದ್ದಾರೆ. ಮನೆಯ ಬಡತನ ಕಂಡು ದಾನೇಶ್ವರಿ ರಜಾ ದಿನಗಳಲ್ಲಿ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು.

ಓದಿಗೆ ಬಡತನ ಅಡ್ಡಿ: ‘ದಾನೇಶ್ವರಿ ಉತ್ತಮ ಅಂಕ ಗಳಿಸಿದ್ದರೂ ಕೂಡ ಬಡತನದಿಂದಉನ್ನತ ಶಿಕ್ಷಣ ನೀಡುವುದು ಸಾಧ್ಯವಾಗುವುದಿಲ್ಲ’ ಎಂದು ತಂದೆ ಸಿದರಾಯ ಬೇಸರ ವ್ಯಕ್ತಪಡಿಸಿದರು.

ದೊರೆತ ಆರ್ಥಿಕ ನೆರವು:ದಾನೇಶ್ವರಿ ಮಟಗಾರ ಅವರಿಗೆ ಆರ್ಥಿಕ ನೆರವು ನೀಡುವುದಾಗಿ ಗೋಕಾಕದ ವಕೀಲ ಗುರುದೇವ ಸಿದ್ದಾಪುರಮಠ ತಿಳಿಸಿದ್ದಾರೆ. ‘ವಿದ್ಯಾರ್ಥಿನಿ ಎಲ್ಲಿವರೆಗೆ ಕಲಿಯುತ್ತಾಳೋ ಅಲ್ಲಿವರೆಗೂ ಕಲಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ’ ಎಂದಿದ್ದಾರೆ.

‘ಪ್ರತಿ ವರ್ಷವೂ ಸರ್ಕಾರಿ ಶಾಲೆಯ ಕೆಲವು ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಳ್ಳುತ್ತೇನೆ. ಅದೇ ರೀತಿ ಈ ಬಾರಿ ದಾನೇಶ್ವರಿಗೆ ಸಹಾಯ ಮಾಡುತ್ತೇನೆ’ ಎಂದು ತಿಳಿಸಿದರು.

‘ಮನೆಯಲ್ಲಿ ನನ್ನನ್ನು ಮುಂದಕ್ಕೆ ಓದಿಸುವುದಿಲ್ಲ ಎನ್ನುವುದು ಗೊತ್ತಿತ್ತು. ಆದರೆ, ನನ್ನ ಕುರಿತು ವರದಿ ಮಾಡಿದ ಪ್ರಜಾವಾಣಿ ಹಾಗೂ ಶೈಕ್ಷಣಿಕವಾಗಿ ದತ್ತು ಪಡೆಯುವುದಾಗಿ ತಿಳಿಸಿರುವ ಗುರದೇವ ಸಿದ್ದಾಪುರಮಠ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಬಿ.ಎ ಓದುತ್ತೇನೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತೇನೆ’ ಎಂದು ದಾನೇಶ್ವರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.