ADVERTISEMENT

ಶಿವಾಜಿ ಜಯಂತಿ | ಅದ್ಧೂರಿ ಮೆರವಣಿಗೆ ಕೈಬಿಟ್ಟು, ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 10:05 IST
Last Updated 25 ಏಪ್ರಿಲ್ 2020, 10:05 IST
ಬೆಳಗಾವಿಯಲ್ಲಿ ಶನಿವಾರ ಜಯಂತಿ ನಿಮಿತ್ತ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಶಾಸಕ ಅನಿಲ ಬೆನಕೆ, ಕಿರಣ ಜಾಧವ ಹಾಗೂ ಇತರರು ಉಪಸ್ಥಿತರಿದ್ದರು
ಬೆಳಗಾವಿಯಲ್ಲಿ ಶನಿವಾರ ಜಯಂತಿ ನಿಮಿತ್ತ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಶಾಸಕ ಅನಿಲ ಬೆನಕೆ, ಕಿರಣ ಜಾಧವ ಹಾಗೂ ಇತರರು ಉಪಸ್ಥಿತರಿದ್ದರು   

ಬೆಳಗಾವಿ: ಮಾರಕ ರೋಗ ಕೋವಿಡ್‌–19 ನಿಯಂತ್ರಿಸಲು ಘೋಷಿಸಲಾಗಿರುವ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶನಿವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ನಗರದ ವಿವಿಧೆಡೆ ಸರಳವಾಗಿ ಆಚರಿಸಲಾಯಿತು.

ಪ್ರತಿ ವರ್ಷ ದಿನವಿಡೀ ನಡೆಯುತ್ತಿದ್ದ ಮೆರವಣಿಗೆಯನ್ನು ರದ್ದುಪಡಿಸಲಾಗಿತ್ತು. ಅಲ್ಲಲ್ಲಿ ನಡೆದ ಸಾಂಕೇತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅತಿಥಿಗಳು ಮಾಸ್ಕ್‌ ಧರಿಸಿ ಹಾಗೂ ತಮ್ಮೊಳಗೆ ಅಂತರ ಕಾಯ್ದುಕೊಳ್ಳುವ ಮೂಲಕ ಗಮನ ಸೆಳೆದರು.

ಬೆಳಿಗ್ಗೆ ಶಹಾಪುರದ ಶಿವಾಜಿ ಉದ್ಯಾನದಲ್ಲಿರುವ ಶಿವಾಜಿ ಮಹಾರಾಜರ ಪುತ್ಥಳಿಗೆರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ಶಾಸಕ ಅನಿಲ ಬೆನಕೆ ಮಾಲಾರ್ಪಣೆ ಮಾಡಿದರು. ನೆರೆದ ಶಿವಭಕ್ತರು ಪ್ರೇರಣಾ ಮಂತ್ರವನ್ನು ನುಡಿದರು. ಆರತಿ ಬೆಳಗಿದರು.

ADVERTISEMENT

ಈ ವೇಳೆ ಮಾತನಾಡಿದ ಸುರೇಶ ಅಂಗಡಿ, ‘ಈ ಸಲ ಲಾಕ್‍ಡೌನ್‍ನ ಹಿನ್ನೆಲೆಯಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಮತ್ತು ಆಚರಿಸಲಾಗುತ್ತಿದೆ. ಶಿವಭಕ್ತರು ತಮ್ಮ ತಮ್ಮ ಮನೆಗಳಲ್ಲಿಯೇ ಆಚರಿಸಬೇಕು. ಯಾರು ಕೂಡ ಮನೆಯಿಂದ ಹೊರಗಡೆ ಬರಬಾರದು. ಶಿವಾಜಿ ಮಹಾರಾಜರು ಸಂಕಷ್ಟದ ವೇಳೆ ಯಾವ ರೀತಿ ಹೋರಾಡಿದ್ದರೋ ಅದೇ ರೀತಿ ಅವರ ತತ್ವಾದರ್ಶಗಳನ್ನ ಪಾಲಿಸಿ ನಾವೂ ಕೂಡ ಕೋವಿಡ್‌–19 ವಿರುದ್ಧ ಹೋರಾಡೋಣ’ ಎಂದರು.

ಶಾಸಕ ಅನಿಲ ಬೆನಕೆ ಮಾತನಾಡಿ, ‘ಅನಾವಶ್ಯಕವಾಗಿ ಹೊರಗಡೆ ಸುತ್ತಾಡಬಾರದು. ಮನೆಯಲ್ಲಿಯೇ ಇದ್ದುಕೊಂಡು ಕೋವಿಡ್‌–19 ವಿರುದ್ಧ ಹೋರಾಡೋಣ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಪಾಲಿಸೋಣ’ ಎಂದು ಹೇಳಿದರು.

ಬಿಜೆಪಿ ಮುಖಂಡ ಕಿರಣ ಜಾಧವ, ಶಹಾಪುರದ ಸಾರ್ವಜನಿಕ ಶಿವಜಯಂತಿ ಉತ್ಸವ ಮಂಡಳದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ಧರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.