ADVERTISEMENT

ಇನ್ಮುಂದೆ ಲಾಕ್ ಡೌನ್ ಇರುವುದಿಲ್ಲ: ಸಚಿವ ಶಿವರಾಮ್ ಹೆಬ್ಬಾರ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 7:30 IST
Last Updated 22 ಜೂನ್ 2020, 7:30 IST
ಬೆಳಗಾವಿಯಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್
ಬೆಳಗಾವಿಯಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್   

ಬೆಳಗಾವಿ: 'ರಾಜ್ಯದಲ್ಲಿ ಇನ್ಮುಂದೆ ಲಾಕ್ ಡೌನ್ ಪರಿಸ್ಥಿತಿ ಮುಂದುವರಿಯುವುದಿಲ್ಲ' ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

ಸಚಿವರಾದ ನಂತರ ಇದೇ ಮೊದಲ ಬಾರಿಗೆ ಸೋಮವಾರ ನಗರಕ್ಕೆ ಬಂದಿದ್ದ ಅವರು ಬಿಜೆಪಿ ಕಚೇರಿಯಲ್ಲಿ ತಮ್ಮನ್ನು ಸ್ವಾಗತಿಸಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

'ಕಾರ್ಮಿಕರು ಧೈರ್ಯವಾಗಿ ಹೋಗಿ ಕೆಲಸ ಮಾಡಬೇಕು. ರಾಜ್ಯ ಹಾಗೂ ರಾಷ್ಟ್ರದ ಪ್ರಗತಿಗಾಗಿ ಗಟ್ಟಿಯಾದ ಹೆಜ್ಜೆಗಳನ್ನು ಇಡಬೇಕಾದ ಸಂದರ್ಭದಲ್ಲಿ ನಾವೆಲ್ಲರೂ ಇದ್ದೇವೆ' ಎಂದರು.

ADVERTISEMENT

'ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳಲ್ಲೂ ಲಾಕ್‌ಡೌನ್ ನಿರ್ಬಂಧಗಳನ್ನು ಮುಂದೆ ಕಡಿಮೆ ಮಾಡಲಾಗುತ್ತದೆ. ಮಕ್ಕಳ ವಿಷಯದಲ್ಲಿ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಪ್ರಧಾನಿ ಹಾಗೂ ಮುಖ್ಯಮಂತ್ರಿ ಇಡುತ್ತಿದ್ದಾರೆ. ಒಂದು ವರ್ಷ ಮಕ್ಕಳ ಭವಿಷ್ಯವನ್ನು ಕಳೆದುಕೊಳ್ಳುತ್ತೇವೆ. ಆದರೆ, ಒಂದು ಮಗವನ್ನೂ ಕೋವಿಡ್-19ನಿಂದ ಕಳೆದುಕೊಳ್ಳುವುದಕ್ಕೆ ಸಿದ್ಧವಿಲ್ಲ. ಮಕ್ಕಳು ಹಾಗೂ ಪೋಷಕರ ಮೇಲೆ ಏನನ್ನೂ ಹೇರಿಕೆ ಮಾಡುವುದಿಲ್ಲ. ಎಲ್ಲಿಯವರೆಗೆ ಪೋಷಕರಲ್ಲಿ ಧೈರ್ಯ ಬರುವುದಿಲ್ಲವೋ ಅಲ್ಲಿವರೆಗೆ ಶಾಲೆಯನ್ನು ಆರಂಭ ಮಾಡುವಂತಹ ಹುಚ್ಚು ನಿರ್ಣಯ ಮಾಡುವುದಕ್ಕೆ ಸರ್ಕಾರ ತಯಾರಿಲ್ಲ. ಸಚಿವ ಸಂಪುಟದಲ್ಲಿ ಈ ಬಗ್ಗೆ ಹಲವು ಬಾರಿ ಚರ್ಚಿಸಿದ್ದೇವೆ. ಆದರೆ, ಪಾಲಕರಿಗೆ ಧೈರ್ಯ ಬಂದಿಲ್ಲ. ಕೆಎಸ್‌ಆರ್‌ಟಿ ಸಿ ಬಸ್ ಓಡಿಸುತ್ತಿದ್ದೇವೆ. ಆದರೆ ಜನರೇ ಬರುತ್ತಿಲ್ಲ. ಹೀಗಾಗಿ ಜನರಿಗೆ ಧೈರ್ಯ ಬರುವವರೆಗೂ ಶಾಲೆಗಳನ್ನು ಆರಂಭಿಸುವುದು ಸರಿಯಲ್ಲ ಎಂದು ನಿರ್ಣಯ ಮಾಡಿದ್ದೇವೆ' ಎಂದರು.

'ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಮಕ್ಕಳ ಸುರಕ್ಷತೆಗಾಗಿ ಎಲ್ಲ ರೀತಿಯ ‌ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸಹಕಾರ ಕೊಡಬೇಕು. ಜನಪ್ರತಿನಿಧಿಗಳು ಕೂಡ ನೆರವಾಗಬೇಕು' ಎಂದರು.

ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಮಾತನಾಡಿ, ಕಾರ್ಮಿಕ ಇಲಾಖೆಯ ಕಚೇರಿಯು ಉದ್ಯಮಬಾಗ್ ಕೈಗಾರಿಕಾ ಪ್ರದೇಶದಲ್ಲಿದೆ. ಇದರಿಂದ ಉತ್ತರದ ಕಾರ್ಮಿಕರಿಗೆ ಹೋಗಿ ಬರಲು ತೊಂದರೆ ಆಗುತ್ತಿದೆ. ಆದ್ದರಿಂದ ನಗರದಲ್ಲಿ ಕಚೇರಿ ಆರಂಭಿಸಿದರೆ ಅನುಕೂಲ ಆಗುತ್ತದೆ' ಎಂದು ಒತ್ತಾಯಿಸಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಪಕ್ಷದ ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.