ADVERTISEMENT

ಕೊಲ್ಹಾಪುರದ ಮಹಾಲಕ್ಷ್ಮಿ ದೇಗುಲ ಪ್ರವೇಶಕ್ಕೆ ಕರ್ನಾಟಕ ಶಾಸಕರಿಗೆ ಶಿವಸೇನಾ ತಡೆ

ಶಾಸಕರಾದ ಪ್ರಭು ಚವ್ಹಾಣ, ಸುನೀಲಕುಮಾರ, ಕರ್ನಾಟಕದ ಮುಖಂಡರನ್ನು ತಡೆದ ಶಿವಸೇನೆ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 13:52 IST
Last Updated 11 ಡಿಸೆಂಬರ್ 2024, 13:52 IST
<div class="paragraphs"><p>ಮಹಾರಾಷ್ಟ್ರದ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿದ ಶಾಸಕರನ್ನು ಶಿವಸೇನೆ ಕೊಲ್ಹಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದೇವಾನೆ, ಮುಖಂಡರಾದ ಸಂಜಯ ಪವಾರ, ಸುನೀಲ್ ಮೋದಿ ತಡೆದರು</p></div>

ಮಹಾರಾಷ್ಟ್ರದ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿದ ಶಾಸಕರನ್ನು ಶಿವಸೇನೆ ಕೊಲ್ಹಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದೇವಾನೆ, ಮುಖಂಡರಾದ ಸಂಜಯ ಪವಾರ, ಸುನೀಲ್ ಮೋದಿ ತಡೆದರು

   

ಬೆಳಗಾವಿ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಮಹಾಲಕ್ಷ್ಮಿ ಅಂಬಾಬಾಯಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿದ, ಶಾಸಕರಾದ ಪ್ರಭು ಚವ್ಹಾಣ, ಸುನೀಲಕುಮಾರ ಹಾಗೂ ಇತರರಿಗೆ ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಕರ್ನಾಟಕದ ನಾಯಕರು ದೇವಸ್ಥಾನದ ಬಾಗಿಲು ಸಮೀಪಿಸುತ್ತಿದ್ದಂತೆಯೇ ಶಿವಸೇನೆಯ ಮುಖಂಡರು, ಕಾರ್ಯಕರ್ತರು ಮುತ್ತಿಗೆ ಹಾಕಿದರು. ಶಾಸಕರು ದೇವಸ್ಥಾನ ಪ್ರವೇಶಿಸದಂತೆ ಕೆಲ ಹೊತ್ತು ತಡೆದು ನಿಲ್ಲಿಸಿದರು. ಕರ್ನಾಟಕ ಸರ್ಕಾರ ಹಾಗೂ ಕನ್ನಡಪರ ಹೋರಾಟಗಾರರ ವಿರುದ್ಧ ಘೋಷಣೆ ಮೊಳಗಿಸಿದರು.

ADVERTISEMENT

ಶಿವಸೇನೆ ಕೊಲ್ಹಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದೇವಾನೆ, ಮುಖಂಡರಾದ ಸಂಜಯ ಪವಾರ, ಸುನೀಲ್ ಮೋದಿ ಮತ್ತಿತರರ ನೇತೃತ್ವದಲ್ಲಿ ಹಲವರು ದೇವಸ್ಥಾನದ ಆವರಣದಲ್ಲಿ ಜಮಾಯಿಸಿದರು. ಬೆಳಗಾವಿ, ಬೀದರ್, ಭಾಲ್ಕು, ಕಾರವಾರ, ನಿಪ್ಪಾಣಿ ಸೇರಿದಂತೆ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೇ ಸೇರಿಸಬೇಕು ಎಂದು ಘೋಷಣೆ ಮೊಳಗಿಸಿದರು.

‘ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಡಿಸೆಂಬರ್ 9ರಂದು ಬೆಳಗಾವಿಯಲ್ಲಿ ಆಯೋಜಿಸಿದ್ದ ‘ಮಹಾ ಮೇಳಾವ್’ ನಿರ್ಬಂಧಿಸಲಾಗಿದೆ. ಮುಖಂಡರನ್ನು ಬಂಧಿಸಲಾಗಿದೆ. ಮರಾಠಿ ಮಾತನಾಡುವ ಜನರ ಭಾವನೆಗಳನ್ನು ವ್ಯಕ್ತಪಡಿಸಲು ಮಹಾಮೇಳಾವ್ ಮಾಡುವುದು ತಪ್ಪೇ? ಮರಾಠರ ಪ್ರತಿಭಟನೆಯ ಹಕ್ಕನ್ನೂ ಕರ್ನಾಟಕ ಸರ್ಕಾರ ಕಿತ್ತುಕೊಂಡಿದೆ’ ಎಂದೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

‘ಎಂಇಎಸ್‌ಗೆ ಬೆಂಬಲ ವ್ಯಕ್ತಪಡಿಸಲು, ಮರಾಠರ ಭಾವನೆಗಳಿಗೆ ಸ್ಪಂದಿಸಲು ನಾವು ಬೆಳಗಾವಿಗೆ ಹೋಗಲು ಆಗುತ್ತಿಲ್ಲ. ಅಪರಾಧಿಗಳು ಎಂಬಂತೆ ನಮ್ಮ ಪ್ರವೇಶ ನಿರ್ಬಂಧಿಸಿದ್ದಾರೆ. ನಾವು ಶಾಂತಿಯುತ ಮೆರವಣಿಗೆ ಮಾಡಿಕೊಂಡು ಕರ್ನಾಟಕ ಪ್ರವೇಶ ಮಾಡುತ್ತಿದ್ದೆವು. ನಿಪ್ಪಾಣಿ ಬಳಿಯೇ ತಡೆದು, ಬಂಧಿಸಿದ್ದಾರೆ’ ಎಂದೂ ಕಿಡಿ ಕಾರಿದರು.

‘ಕರ್ನಾಟಕಕ್ಕೆ ನಮಗೆ ಪ್ರವೇಶ ನೀಡುವುದಿಲ್ಲ ಎಂದಾದರೆ ನಮ್ಮ ಊರಿನ ದೇವಸ್ಥಾನಕ್ಕೆ ನೀವೇಕೆ ಬರುತ್ತೀರಿ’ ಎಂದೂ ಪ್ರಶ್ನೆ ಮಾಡಿದರು.

‘ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಮುಗಿಯುವರೆಗೂ ಆ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂಬ ಬೇಡಿಕೆಗೆ ಈಗಲೂ ನಾವು ಬದ್ಧ. ಕರ್ನಾಟಕದಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಅದನ್ನು ತಡೆಯಲು ಶಾಸಕರು ಸರ್ಕಾರದ ಗಮನ ಸೆಳೆಯಬೇಕು’ ಎಂದೂ ಆಗ್ರಹಿಸಿದರು.

ಮನವಿ ಆಲಿಸಿದ ಬಳಿಕ ಶಾಸಕರು ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು.

ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ನಿಧನದ ಹಿನ್ನೆಲೆಯಲ್ಲಿ ಬುಧವಾರ ಬೆಳಗಾವಿಯ ಚಳಿಗಾಲದ ಆಧಿವೇಶನಕ್ಕೆ ರಜೆ ನೀಡಲಾಗಿದೆ. ಬಿಡುವು ಸಿಕ್ಕಿದ್ದರಿಂದ ಹಲವು ನಾಯಕರು ಕೊಲ್ಹಾಪುರಕ್ಕೆ ಪ್ರವಾಸ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.