ADVERTISEMENT

ಸಿದ್ದರಾಮಯ್ಯ ಹೃದಯಹೀನ ಮುಖ್ಯಮಂತ್ರಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಕಿಡಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 8:12 IST
Last Updated 12 ಡಿಸೆಂಬರ್ 2024, 8:12 IST
   

ಹಿರೇಬಾಗೇವಾಡಿ (ಬೆಳಗಾವಿ ಜಿಲ್ಲೆ): ‘ಲಿಂಗಾಯತರ ವಿರುದ್ಧ ಸಿದ್ದರಾಮಯ್ಯ ಹೃದಯಹೀನರಾಗಿ ನಡೆದುಕೊಂಡಿದ್ದಾರೆ. ನೀವು ಅಧಿಕಾರಕ್ಕೆ ಬರಲು ನಾವು ಆಶೀರ್ವಾದ ಮಾಡಿದ್ದೇವು. ಅದಕ್ಕೆ ಪ್ರತಿಯಾಗಿ ನಮ್ಮನ್ನೇ ಹೊಡೆದಿದ್ದೀರಿ. ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಎದುರಿಸುತ್ತೀರಿ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.

ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿಚಾರ್ಜ್‌ ಖಂಡಿಸಿ, ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಗುರುವಾರ ಧರಣಿ ನಡೆಸಿದ ಬಳಿಕ ಅವರು ಮಾತನಾಡಿದರು.

‘ಲಾಠಿಚಾರ್ಜ್‌ ನಡೆಸಿದಾಗ ನಮ್ಮ ಸಮಾಜದ ಒಬ್ಬ ಶಾಸಕರು ಮುಖ್ಯಮಂತ್ರಿ ಬಳಿ ಹೋಗಿ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಲಾಠಿಚಾರ್ಜ್‌ ನಿಲ್ಲಿಸಿ ಎಂದು ಕೇಳಿದ್ದಾರೆ.

ADVERTISEMENT

‘ಏಯ್‌ ಹೊಡೀಲಿ ಬಿಡರಿ ಅವರನ್ನು. ಅವರು ನಮ್ಮನ್ನೇ ಹೆದರಿಸುತ್ತಾರೆಯೇ? ನಮ್ಮ ಬಳಿಯೂ ಲಾಠಿ ಇದೆ’ ಎಂದು ಸಿದ್ದರಾಮಯ್ಯ ಮಾರುತ್ತರ ನೀಡಿದ್ದಾರೆ. ಈ ವಿಷಯವನ್ನು ಶಾಸಕರೇ ಬಂದು ನನಗೆ ಹೇಳಿದ್ದಾರೆ. ಸುವರ್ಣ ವಿಧಾನಸೌಧದ ಸಿಸಿಟಿವಿ ಕ್ಯಾಮೆರಾಗಳನ್ನು ತಪಾಸಣೆ ಮಾಡಿ ಖಾತ್ರಿ ಮಾಡಿಕೊಳ್ಳಬಹುದು’ ಎಂದರು.

‘ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದಾಗ ನಾವೆಲ್ಲ ನಿಮ್ಮ ತಲೆ ಮೇಲೆ ಹೂವು ಹಾಕಿ ಆಶೀರ್ವಾದ ಮಾಡಿದ್ದೇವು. ಆದರೆ, ಲಿಂಗಾಯತರ ಬಗ್ಗೆ ನಿಜವಾಗಿಯೂ ನಿಮ್ಮ ಧೋರಣೆ ಏನು ಎಂಬುದನ್ನು ಈಗ ತೋರಿಸಿದ್ದೀರಿ. 2028ಕ್ಕೆ ನಮ್ಮ ಸಮಾಜಕ್ಕೆ ಗೌರವ ಕೊಡುವ ಮುಖ್ಯಮಂತ್ರಿಯನ್ನೇ ನಾವು ಆರಿಸುತ್ತೇವೆ’ ಎಂದೂ ಸ್ವಾಮೀಜಿ ಎಚ್ಚರಿಸಿದರು.

‘ನಿಮ್ಮ ಸರ್ಕಾರ ಇರುವವರೆಗೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವುದೇ ಇಲ್ಲ ಎಂಬುದನ್ನಾದರೂ ಸ್ಪಷ್ಟಪಡಿಸಬೇಕು. ನಂತರ ನಮ್ಮ ದಾರಿ ನಾವು ಕಂಡುಕೊಳ್ಳುತ್ತೇವೆ. ತಕ್ಷಣವೇ ಎಲ್ಲರ ಮೇಲಿನ ಪ್ರಕರಣ ಹಿಂಪಡೆಯಬೇಕು. ಬಹಿರಂಗವಾಗಿ ಸಮಾಜದ ಕ್ಷಮೆ ಕೇಳಬೇಕು. ಅಲ್ಲಿಯವರೆಗೂ ರಾಜ್ಯದಾದ್ಯಂತ ಹೋರಾಟ ನಿಲ್ಲುವುದಿಲ್ಲ’ ಎಂದರು.

‘ಪೊಲೀಸರೇ ಮಫ್ತಿಯಲ್ಲಿ ಬಂದು, ನಮ್ಮ ಟವಲ್‌ ಹೆಗಲಿಗೆ ಹಾಕಿಕೊಂಡು ಅವರೇ ಕಲ್ಲೆಸೆದಿದ್ದಾರೆ. ಅವರ ವಾಹನಗಳನ್ನು ಅವರೇ ಜಖಂ ಮಾಡಿದ್ದಾರೆ. ಇದೆಲ್ಲಕ್ಕೂ ಡ್ರೊನ್‌ ಕ್ಯಾಮೆರಾದಲ್ಲಿ, ಮಾಧ್ಯಮಗಳ ಕ್ಯಾಮೆರಾದಲ್ಲಿ ಸಾಕ್ಷಿ ಇವೆ’ ಎಂದು ಆರೋಪಿಸಿದರು.

‘ಮೀಸಲಾತಿಗಾಗಿ ನಮ್ಮ ಜನ ರಾಷ್ಟ್ರೀಯ ಹೆದ್ದಾರಿ ಮೇಲೆ ರಕ್ತ ಚೆಲ್ಲಿದ್ದಾರೆ. ಅದನ್ನು ನಾನು ಗೌರವಿಸುತ್ತೇನೆ. ಹಲವಾರು ಜನರಿಗೆ ಭಾರಿ ಪೆಟ್ಟಾಗಿದೆ. ಮುಗಳಖೋಡದ ಕಾಪ್ಸಿ ಎಂಬುವವರ ಒಂದು ಕಾಲು ಶಾಶ್ವತವಾಗಿ ಮುರಿದಿದೆ. ಸಿದ್ದರಾಮಯ್ಯ ಅವರೇ ನೀವು ಇನ್ನೊಂದು ಕಾಲನ್ನೂ ಮುರಿಯಿರಿ. ನಾವು ತೆವಳಿಕೊಂಡಾದರೂ ಹೋರಾಟ ಮಾಡಿಯೇ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.