ADVERTISEMENT

ವಿಮಾನದಲ್ಲಿ ಹೋದರೆ ಜನರ ಕಷ್ಟ ಗೊತ್ತಾಗುತ್ತಾ: ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 8:58 IST
Last Updated 19 ಅಕ್ಟೋಬರ್ 2020, 8:58 IST
ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ   

ಬೆಳಗಾವಿ: ‘ಪ್ರವಾಹವಿದ್ದಾಗ ಅಥವಾ ರಸ್ತೆಯಲ್ಲಿ ಹೋಗಲಾಗದಂತಹ ಸ್ಥಿತಿ ಇದ್ದರೆ ವಿಮಾನದಲ್ಲಿ ಹೋಗಲಿ. ಆದರೆ, ಈಗ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ಮಾಡಿ ಮೇಲೆ ಸುತ್ತಾಡಿದರೆ ಜನರ ಕಷ್ಟ ಗೊತ್ತಾಗುತ್ತದೆಯೇ?’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೇಳಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಹೋದ ವರ್ಷ ಆಗಸ್ಟ್‌, ಈ ವರ್ಷ ಆಗಸ್ಟ್‌ನಿಂದ ಈವರೆಗೂ ಆಗಾಗ ಪ್ರವಾಹ ಉಂಟಾಗಿದೆ. ಪ್ರಧಾನಿ ಒಮ್ಮೆಯಾದರೂ ಕರ್ನಾಟಕಕ್ಕೆ ಬಂದರೇ? 2009ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಪ್ರವಾಹ ಬಂದಿತ್ತು. ಆಗ, ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಸಮೀಕ್ಷೆ ಮಾಡಿದ್ದರು. ಆಗ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೆರೆ ಬಂದಿರಲಿಲ್ಲ. ₹1 ಸಾವಿರ ಕೋಟಿಯನ್ನು ಆ ಪ್ರಧಾನಿ ಘೋಷಿಸಿದ್ದರು. ಈಗಿನ ಪ್ರಧಾನಿ ಏನು ಮಾಡುತ್ತಿದ್ದಾರೆ?’ ಎಂದು ಕೇಳಿದರು.

ADVERTISEMENT

‘ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದರು, ಹೋದರು. ಹಣ ಕೊಟ್ಟಿದ್ದಾರಾ? ₹35 ಸಾವಿರ ಕೋಟಿ ಕೇಳಿದರೆ ಅವರು ಕೊಟ್ಟಿರುವುದು ₹ 1,652 ಕೋಟಿ ಮಾತ್ರ. ಅದಾದ ನಂತರ ಒಂದು ಪೈಸೆಯನ್ನೂ ಕೊಟ್ಟಿಲ್ಲ. 25 ಸಂಸದರನ್ನು ಕಳುಹಿಸಿಕೊಟ್ಟಿದ್ದರಿಂದ ಅಸಡ್ಡೆ ವಹಿಸಿದ್ದಾರೆ. ಸೋಲಿಸಿದರೆ ಅವರಿಗೆ ಬುದ್ಧಿ ಬರುತ್ತದೆ’ ಎಂದರು.

‘ಉಪ ಚುನಾವಣೆಯಲ್ಲಿ ಅನುಕೂಲ ಜಾಸ್ತಿ. ಸುಳ್ಳು ಹೇಳೋಕೆ, ಹಣ ಹಂಚೋಕೆ ಅವರಿಗೆ ಅವಕಾಶ ಇರುತ್ತದೆ. ಆದರೆ, ಆರ್‌.ಆರ್. ನಗರ ಹಾಗೂ ಶಿರಾದಲ್ಲಿ ನಾವೇ ಗೆಲ್ಲುತ್ತೇವೆ’ ಎಂದು ತಿಳಿಸಿದರು.

‘ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕಡಿತಗೊಳಿಸಿದ್ದಾರೆ. ಇಂದಿರಾ ಕ್ಯಾಂಟೀನ್‌ಗಳಿಗೆ ಹಣ ಕೊಡುತ್ತಿಲ್ಲ. ಕೃಷಿ ಭಾಗ್ಯ, ವಿದ್ಯಾಸಿರಿ ನಿಲ್ಲಿಸಿದ್ದಾರೆ. ಎಲ್ಲ ಯೋಜನೆಯನ್ನೂ ನಿಲ್ಲಿಸಿ ‘ಸ್ವಾಹ ಭಾಗ್ಯ’ ಅವರದು’ ಎಂದು ಟೀಕಿಸಿದರು.

ಜೆಡಿಎಸ್‌ ಅನ್ನು ಜನ ಮುಗಿಸುತ್ತಾರೆ: ‘ಜೆಡಿಎಸ್‌ನ ನಾವು ಮುಗಿಸುವುದಿಲ್ಲ. ಸೈದ್ಧಾಂತಿಕ ಗಟ್ಟಿತನ ಹಾಗೂ ನಿಲುವು ಇಲ್ಲದೆ ಹೋದರೆ ಜನರೇ ಮುಗಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.