ADVERTISEMENT

ಸಂತೋಷ್ ಪಾಟೀಲ್ ಅವರ ಗುತ್ತಿಗೆ ಹಣ ₹4 ಕೋಟಿ ಕೂಡಲೇ ಪಾವತಿಸಬೇಕು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 13:35 IST
Last Updated 13 ಏಪ್ರಿಲ್ 2022, 13:35 IST
ಸಂತೋಷ್ ಪಾಟೀಲ್ ಮನೆಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕರು
ಸಂತೋಷ್ ಪಾಟೀಲ್ ಮನೆಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕರು   

ಬೆಳಗಾವಿ: ಅಮಾನವೀಯವಾದ ಸಾವಾಗಿದೆ. ಇದಕ್ಕೆ ಸಚಿವ ಈಶ್ವರಪ್ಪ ಅವರೇ ನೇರ ಕಾರಣ ಎಂದು ಸಂತೋಷ್ ಪಾಟೀಲಸಂದೇಶ ಕಳುಹಿಸಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಅವರ ತಾಯಿ ಹಾಗೂ ಪತ್ನಿಯೂ ಆದೇ ಮಾತು ಹೇಳಿದ್ದಾರೆ. ಅವರಿಗೆ ಶಿಕ್ಷೆ ಆಗಬೇಕು; ನಮಗೆ ನ್ಯಾಯ ಸಿಗಬೇಕು ಎಂದು ಸಂತೋಷ್ ಮನೆಗೆ ಭೇಟಿ ನೀಡಿದ ಬಳಿಕಸಿದ್ದರಾಮಯ್ಯಹೇಳಿದರು. ಅವರಿಗೆ ಸಾಂತ್ವನ ಹೇಳಿದ್ದೇವೆ. ನ್ಯಾಯ ಕೊಡಿಸುವುದಕ್ಕಾಗಿ ಹೋರಾಡುತ್ತೇವೆ’ ಎಂದರು.

‘ಸಂತೋಷ್, ಸಚಿವರು ಹೇಳದೆ ಕೆಲಸ ಮಾಡಿರುವುದಿಲ್ಲ. ಕಾರ್ಯಾದೇಶ, ಬಿಲ್‌ ಪಾವತಿಸುವಾಗ ಶೇ 40ರಷ್ಟು ಕಮಿಷನ್‌ ಕೇಳಿದ್ದಾರೆ. ಅವರು ಮಾಡಿರುವ ಕೆಲಸಕ್ಕೆ ಸಂಬಂಧಿಸಿದ ₹ 4 ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಏಕೆಂದರೆ, ಅವರು ಸಾಲ ಮಾಡಿ, ಚಿನ್ನ ಗಿರವಿ ಇಟ್ಟು ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ಸಚಿವರ ಭ್ರಷ್ಟಾಚಾರದಿಂದಾಗಿ ಇಡೀ ಕುಟುಂಬ ಅನಾಥವಾಗಿದೆ’ ಎಂದರು.

‘ಸಚಿವರೇ ಕಾರಣ ಎಂದು ನೇರವಾಗಿ ಆರೋಪಿಸಿರುವುದರಿಂದ ಇದು ಕೊಲೆಯಾಗುತ್ತದೆ. ಹೀಗಾಗಿ, ಆರೋಪಿಯನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ಈಶ್ವರಪ್ಪ ಸೇರಿದಂತೆ ಎಲ್ಲ ಸಚಿವರು ರಾಕ್ಷಸಪ್ರವೃತ್ತಿಯವರಾಗಿದ್ದಾರೆ. ಪ್ರತಿ ಕಾಮಗಾರಿಗೂ ಇಂತಿಷ್ಟು ಪರ್ಸಂಟೇಜ್‌ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸಂತೋಷ್ ಕುಟುಂಬಕ್ಕೆ ನ್ಯಾಯ ಕೊಡಿಸಲು ಕಾಂಗ್ರೆಸ್‌ನಿಂದ ಹೋರಾಟ ಮಾಡಲಾಗುವುದು’ ಎಂದರು.

‘ಅವರು ಬೇಜವಾಬ್ದಾರಿ ಸಚಿವ. ಭ್ರಷ್ಟಾಚಾರಿ. ಅಪರಾಧಿ ಸ್ಥಾನದಲ್ಲಿ ನಿಂತವರು ಸತ್ಯ ಹೇಳುತ್ತಾರೆಯೇ?’ ಎಂದು ಕೇಳಿದರು.

‘ತಪ್ಪುಗಳನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ಏನೇನೋ ಆರೋಪಗಳನ್ನು ಮಾಡುತ್ತಿದ್ದಾರೆ. ಅವೆಲ್ಲವನ್ನೂ ನಂಬಲಾಗದು’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.