ADVERTISEMENT

ಪ್ರವಾಹ ಹಾನಿ ಚರ್ಚೆಗೆ ಅಧಿವೇಶನ: ಸಿದ್ದರಾಮಯ್ಯ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 16:31 IST
Last Updated 27 ಜುಲೈ 2021, 16:31 IST
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನೆರೆಯಿಂದ ಹಾನಿ ಆಗಿರುವುದನ್ನು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ವೀಕ್ಷಿಸಿದರು. ಶಾಸಕರಾದ ಡಾ.ಅಂಜಲಿ ನಿಂಬಾಳ್ಕರ್, ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ ಇದ್ದಾರೆ
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನೆರೆಯಿಂದ ಹಾನಿ ಆಗಿರುವುದನ್ನು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ವೀಕ್ಷಿಸಿದರು. ಶಾಸಕರಾದ ಡಾ.ಅಂಜಲಿ ನಿಂಬಾಳ್ಕರ್, ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ ಇದ್ದಾರೆ   

ಬೆಳಗಾವಿ: ‘ಪ್ರವಾಹದಿಂದ ಹಾನಿಯಾಗಿರುವ ಕುರಿತು ಚರ್ಚೆ ನಡೆಸಲು ತಕ್ಷಣವೇ ಅಧಿವೇಶನ ಕರೆಯಬೇಕು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಜಿಲ್ಲೆಯ ಖಾನಾಪುರ, ಬೆಳಗಾವಿ ಗ್ರಾಮೀಣ, ಯಮಕನಮರಡಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅತಿವೃಷ್ಟಿ ಹಾಗೂ ನೆರೆಯಿಂದ ಉಂಟಾಗಿರುವ ಹಾನಿಯನ್ನು ಮಂಗಳವಾರ ಪರಿಶೀಲಿಸಿ, ಸಂತ್ರಸ್ತರ ಅಹವಾಲು ಆಲಿಸಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘2019ರಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗಿತ್ತು. ಇಲ್ಲಿಯವರೆಗೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಪರಿಹಾರ ನೀಡಿಲ್ಲ. ಪ್ರಧಾನಿಯು ಪ್ರವಾಹ ವೀಕ್ಷಣೆಗೆ ಬರಲೇ ಇಲ್ಲ’ ಎಂದು ಟೀಕಿಸಿದರು.

ADVERTISEMENT

‘ನೆರೆ ಪೀಡಿತ ಪ್ರದೇಶಗಳಲ್ಲಿ ಹಾನಿ ಆಗಿರುವ ಬಗ್ಗೆ ಪರಿಶೀಲನೆ ನಡೆಸಲು ಪಕ್ಷದಿಂದ ತಂಡಗಳನ್ನು ರಚನೆ‌ ಮಾಡಲಾಗಿದೆ. ಸಂತ್ರಸ್ತರಿಗೆ ಹೇಗೆ ನೆರವಾಗಬೇಕು ಎಂಬ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ, ಆ ಹಣವನ್ನು ಪರಿಹಾರ ಕಾರ್ಯಕ್ಕೆ ವಿನಿಯೋಗಿಸಬೇಕು’ ಎಂದರು.

ಸುಳ್ಳು ಹೇಳುತ್ತಾರೆ:

‘ಪರಿಹಾರ ಕೊಟ್ಟಿದ್ದೀವೆ ಎಂದು ಬಿಜೆಪಿಯವರು ಹೇಳುತ್ತಾರೆ. ಅದೆಲ್ಲ ಸುಳ್ಳು. ಎರಡು ವರ್ಷ ಕಳೆದರೂ ಅರ್ಧದಷ್ಟು ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಈಗ ಕೊಟ್ಟಿಲ್ಲ ಅಂದರೆ ಇನ್ಯಾವಾಗ ಅವರಿಗೆ ಪರಿಹಾರದ ಹಣ ಕೊಡುವುದು?’ ಎಂದು ಕೇಳಿದರು.

‘ಅವಿಭಕ್ತ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿದ ರೀತಿ ಅವೈಜ್ಞಾನಿಕವಾಗಿದೆ. ಕೆಲವು ಮನೆಗಳಲ್ಲಿ ಮೂರು - ನಾಲ್ಕು ಕುಟುಂಬಗಳು ವಾಸವಿರುತ್ತವೆ. ಅಂತಹ ಮನೆಗಳು ಪ್ರವಾಹದಿಂದ ಬಿದ್ದು ಹೋದರೆ ಪ್ರತಿ ಕುಟುಂಬಕ್ಕೂ ಪ್ರತ್ಯೇಕ ಮನೆ ಕಟ್ಟಿಸಿಕೊಡುವಂತೆ ನಾನು ಈ ಹಿಂದೆಯೇ ಸರ್ಕಾರಕ್ಕೆ ಮನವಿ ಮಾಡಿದ್ದೆ. ಆದರೆ, ಸರ್ಕಾರ ಅಂತಹ ಕುಟುಂಬಗಳಿಗೆ ಒಂದು ಮನೆ ಕಟ್ಟಿಸಿಕೊಟ್ಟು ಕೈತೊಳೆದುಕೊಂಡಿದೆ. ಹೀಗಾದರೆ ಕುಟುಂಬದ ಉಳಿದವರು ಎಲ್ಲಿ ಹೋಗಬೇಕು’ ಎಂದು ಪ್ರಶ್ನಿಸಿದರು.

‘ಮಲಪ್ರಭಾ ನದಿ ನೀರು ನುಗ್ಗಿದ ಪರಿಣಾಮ ಖಾನಾಪುರದ ದುರ್ಗಾನಗರ ಮತ್ತು ಮಾರುತಿ ನಗರ ಸಂಪೂರ್ಣ ಜಲಾವೃತಗೊಂಡಿವೆ.‌ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಆದರೆ, ಅವರಿಗೆ ಅಗತ್ಯ ನೆರವು ನೀಡಿಲ್ಲ’ ಎಂದು ದೂರಿದರು.

‘ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ. ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಕೋರುತ್ತೇನೆ’ ಎಂದರು.

ನಂದಗಡದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ರಾಯಣ್ಣ ಸ್ಮಾರಕ ಸೈನಿಕ ಶಾಲೆ, ವಸ್ತುಸಂಗ್ರಹಾಲಯ ಹಾಗೂ ವಿವಿಧ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕರಾದ ಡಾ.ಅಂಜಲಿ ನಿಂಬಾಳ್ಕರ, ಲಕ್ಷ್ಮಿ ಹೆಬ್ಬಾಳಕರ, ಮುಖಂಡ ಅಶೋಕ ಪಟ್ಟಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.