ಐಗಳಿ: ‘ಸನ್ಯಾಸ, ತ್ಯಾಗ ಮತ್ತು ಜ್ಞಾನದ ಮೂರ್ತ ಸ್ವರೂಪವಾಗಿದ್ದ, ಶತಮಾನದ ಸಂತ ಸಿದ್ಧೇಶ್ವರ ಶ್ರೀಗಳ ತತ್ವಗಳನ್ನು ಪ್ರತಿ ಹಳ್ಳಿಗೂ ತಲುಪಿಸುವ ಮಹತ್ವದ ಸಂಕಲ್ಪ ಹೊಂದಲಾಗಿದೆ. ಅವರ ಪಾದುಕೆಗಳ ಸಹಿತ 83 ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಲಾಗುವುದು’ ಎಂದು ಕಕಮರಿಯ ಗುರುದೇವ ಆಶ್ರಮದ ಆತ್ಮಾರಾಮ ಶ್ರೀ ಹೇಳಿದರು.
ಸಮೀಪದ ಕಕಮರಿ ಗ್ರಾಮದ ಗುರುದೇವ ಆಶ್ರಮದಲ್ಲಿ ಆತ್ಮಾರಾಮ ಶ್ರೀಗಳ ಅಖಂಡ ನಿರಾಹಾರ ಮೌನ ಅನುಷ್ಠಾನ ಮತ್ತು ಕೋಟಿ ಜಪಯಜ್ಞ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಿದ್ಧೇಶ್ವರ ಶ್ರೀಗಳ ಬದುಕಿನ ವೈರಾಗ್ಯಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ; ಅವರು ಸುಮಾರು 10 ವರ್ಷಗಳ ಕಾಲ ಒಂದೇ ಜೊತೆ ಪಾದುಕೆ ಮೆಟ್ಟಿದ್ದು. ಆ ಪಾದುಕೆಗಳು ಕೇವಲ ಪಾದರಕ್ಷೆಗಳಲ್ಲ, ಅವರ ಅಸಂಗತ್ವದ ಸಂಕೇತ. ಅವರ ತತ್ವ– ಸಿದ್ಧಾಂತಗಳನ್ನು ಸಾರುವ ಉದ್ದೇಶದಿಂದ ಆಶ್ರಮವು ಪಾದಯಾತ್ರೆ ಕೈಗೊಳ್ಳಲಿದೆ’ ಎಂದರು.
‘ಡಿಸೆಂಬರ್ 30ರಂದು ವೈಕುಂಠ ಏಕಾದಶಿಯ ಪುಣ್ಯದಿನದಂದು, 40 ಸಾವಿರಕ್ಕೂ ಹೆಚ್ಚು ಭಕ್ತಾದಿಗಳ ಸಮ್ಮುಖದಲ್ಲಿ ಸಿದ್ದೇಶ್ವರ ಶ್ರೀಗಳ ಪಾದರಕ್ಷೆ ಮೆರವಣಿಗೆ ಆರಂಭಿಸಲಾಗುವುದು. ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ಸಹ ಇದರಲ್ಲಿ ಪಾಲ್ಗೊಳ್ಳುವರು’ ಎಂದರು.
ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ, ಅಮ್ಮಾಜೇಶ್ವರಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಅಪ್ಪುಗೌಡಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀ, ಶ್ರದ್ಧಾನಂದ ಶ್ರೀ, ಮಲ್ಲಿಕಾರ್ಜುನ ಶ್ರೀ, ಯೋಗಾನಂದ ಶ್ರೀ, ಸಿದ್ದರಾಮೇಶ್ವರ ಪಟ್ಟದ ದೇವರು, ಅದ್ವೈತಾನಂದ ಶ್ರೀ, ಗಂಗಣ್ಣ ಮಹಾರಾಜರು ಸೇರಿದಂತೆ ಗಣ್ಯರು, ಮುಖಂಡರು ಇದ್ದರು. ಮಹಾಂತೇಶ ಮಠಪತಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಕರಡಿ ನಿರೂಪಿಸಿ, ವಂದಿಸಿದರು.
ದೇವರನ್ನೇ ನಾಚಿಸುವ ಶುದ್ಧ ವೈರಾಗ್ಯವನ್ನು ಸಿದ್ಧೇಶ್ವರ ಶ್ರೀಗಳು ಲೋಕಕ್ಕೆ ತೋರಿಸಿದರು. ತಮ್ಮ ನಿಷ್ಕಾಮ ಜ್ಞಾನದಿಂದ ಸಮಾಜಕ್ಕೆ ಬೆಳಕಾದರುಆತ್ಮಾರಾಮ ಸ್ವಾಮೀಜಿ ಗುರುದೇವ ಆಶ್ರಮ ಕಕಮರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.