
ಬೆಳಗಾವಿ: ‘ಇಲ್ಲಿ ಕಳೆದ ವರ್ಷ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನ ವೇಳೆ ಮೀಸಲಾತಿಗಾಗಿ ಕೈಗೊಂಡಾಗ, ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಪ್ರಕರಣ ಖಂಡಿಸಿ, ಡಿ.10ರಂದು ಸುವರ್ಣ ವಿಧಾನಸೌಧ ಸಮೀಪ ಮೌನ ಸತ್ಯಾಗ್ರಹ ನಡೆಸಲಾಗುವುದು’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
‘ಹಲ್ಲೆ ಘಟನೆ ಖಂಡಿಸಿ, ಡಿ.10ರಂದು ಲಿಂಗಾಯತರ ಮೇಲಿನ ದೌರ್ಜನ್ಯ ದಿನ ದಿನ ಆಚರಿಸುತ್ತೇವೆ. ಕೈಗೆ ಕಪ್ಪುಬಟ್ಟೆ ಕಟ್ಟಿಕೊಂಡು, ಗಾಂಧಿ ಭವನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಮೌನ ಸತ್ಯಾಗ್ರಹ ಮಾಡುತ್ತೇವೆ. ಇದರಲ್ಲಿ ಸಾವಿರಾರು ಜನರು ಸೇರಲಿದ್ದಾರೆ’ ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಪಂಚಮಸಾಲಿ ಸಮುದಾಯದ ಎಲ್ಲ ಶಾಸಕರು ಈಗಲೂ ನಮ್ಮೊಂದಿಗೆ ಇದ್ದಾರೆ. ಇದರಲ್ಲಿ ಅನುಮಾನದ ಪ್ರಶ್ನೆಯೇ ಇಲ್ಲ. ಯಾರದ್ದಾದರೂ ಒತ್ತಡಕ್ಕೆ ಮಣಿದು ಮೀಸಲಾತಿಗಾಗಿ ಸದನದಲ್ಲಿ ಮಾತನಾಡಲು ಆಗದಿದ್ದರೆ, ಕನಿಷ್ಠ ಪಕ್ಷ ನಮ್ಮ ಮೇಲೆ ಆಗಿರುವ ಹಲ್ಲೆ ಪ್ರಕರಣವನ್ನಾದರೂ ಖಂಡಿಸಬೇಕು’ ಎಂದರು ತಿಳಿಸಿದರು.
‘ನಾನು ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಮೀಸಲಾತಿ ಪತ್ರ ಕೈಸೇರುವವರೆಗೂ ನಮ್ಮ ಹೋರಾಟ ನ್ಯಾಯಯುತವಾಗಿ ಮುಂದುವರಿಯಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.