ADVERTISEMENT

ಸಿರಿಧಾನ್ಯ ಖರೀದಿಗೆ ಮುಗಿಬಿದ್ದ ಜನ

ಸಿರಿಧಾನ್ಯ– ಸಾವಯವ ಮೇಳಕ್ಕೆ ಚಾಲನೆ ನೀಡಿದ ಸಚಿವ ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:23 IST
Last Updated 28 ಜನವರಿ 2023, 6:23 IST
ಬೆಳಗಾವಿಯ ಸರ್ದಾರ ಮೈದಾನದಲ್ಲಿ ಆಯೋಜಿಸಿದ ಸಿರಿಧಾನ್ಯ ಮೇಳದಲ್ಲಿ ಗುರುವಾರ, ಸಚಿವ ಗೋವಿಂದ ಕಾರಜೋಳ ಧಾನ್ಯಗಳನ್ನು ಪರಿಶೀಲಿಸಿದರು / ಪ್ರಜಾವಾಣಿ ಚಿತ್ರ
ಬೆಳಗಾವಿಯ ಸರ್ದಾರ ಮೈದಾನದಲ್ಲಿ ಆಯೋಜಿಸಿದ ಸಿರಿಧಾನ್ಯ ಮೇಳದಲ್ಲಿ ಗುರುವಾರ, ಸಚಿವ ಗೋವಿಂದ ಕಾರಜೋಳ ಧಾನ್ಯಗಳನ್ನು ಪರಿಶೀಲಿಸಿದರು / ಪ್ರಜಾವಾಣಿ ಚಿತ್ರ   

ಬೆಳಗಾವಿ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಹಾಗೂ ಕೃಷಿ ಸಮಾಜ ಆಶ್ರಯದಲ್ಲಿ ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಿರಿಧಾನ್ಯ ಮೇಳ ಗಮನ ಸೆಳೆಯಿತು. ವಿವಿಧ ಬಗೆಯ ಸಿರಿಧಾನ್ಯಗಳು ಹಾಗೂ ಆಹಾರೋತ್ಪನ್ನಗಳು ಜನಮನ ಸೆಳೆದವು.

ಸಂಜೆಯ ಹೊತ್ತಿಗಂತೂ 80ಕ್ಕೂ ಹೆಚ್ಚು ಮಳಿಗೆಗಳಲ್ಲಿ ಜನಜಂಗುಳಿ ತುಂಬಿತು. ಮಕ್ಕಳ ತಿನಿಸುಗಳಿಂದ ಹಿಡಿದು ಹಿರಿಯರು ಪಥ್ಯ ಮಾಡುವ ವೈವಿಧ್ಯಮಯ ತಿನಿಸುಗಳನ್ನು ಖರೀದಿಸಲು ಜನ ಮುಗಿಬಿದ್ದರು.

ಸಜ್ಜೆ, ನವನೆ, ಸಾವೆ, ಊದಲು, ಬಾರ್ಲಿ, ಜೋಳ, ರಾಗಿ ಸೇರಿದಂತೆ ವಿವಿಧ ಸಿರಿಧಾನ್ಯಗಳು ಹಾಗೂ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಧಾನ್ಯಗಳ ಪ್ರದರ್ಶನ ಗಮನ ಸೆಳೆಯಿತು. ನೈಸರ್ಗಿಕವಾಗಿ ತೆಗೆದ ಕಬ್ಬಿನ ರಸ, ಶೇಂಗಾ– ಕುಸುಬೆಯಿಂದ ಮಾಡಿದ ಅಡುಗೆಎಣ್ಣೆ, ಹುಣಸೆ ಹಣ್ಣಿನ ಚಟ್ನಿ, ವಿವಿಧ ಚೂರ್ಣಗಳು, ಗಂಜಿ ಮಾಡುವ ಪದಾರ್ಥಗಳು, ಮಧುಮೇಹ– ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿಯಾಗುವ ಪೇಯಗಳು ಬಿಕರಿಯಾದವು. ಸಿರಿಧಾನ್ಯಗಳಿಂದ ಮಾಡಿದ ಬಿಸ್ಕತ್ತು, ಚಾಕೊಲೇಟ್‌, ಐಸ್ಕ್ರೀಂ, ಕೇಕ್‌ ಮುಂತಾದ ತಿನಿಸುಗಳನ್ನು ಜನ ನಾಲಿಗೆ ಚಪ್ಪರಿಸಿ ಸವಿದರು.

ADVERTISEMENT

ಹಲವು ರೈತರು ಸಿರಿಧಾನ್ಯಗಳ ಪ್ಯಾಕ್‌ಗಳನ್ನು ಮಾಡಿ ಮಾರಾಟ ಮಾಡಿದರು. ಮನೆಯಲ್ಲೇ ಕಬ್ಬಿನ ಜೂಸ್‌, ಎಳನೀರು ಸೇವಿಸಲು ಅನುಕೂಲವಾಗುವ ಪುಟ್ಟ ಯಂತ್ರಗಳಿಂದ ಹಿಡಿದು ದೊಡ್ಡ ಕೃಷಿ ಯಂತ್ರೋಪಕರಣಗಳೂ ರೈತರನ್ನು ಸೆಳೆದವು.

ಸಿರಿಧಾನ್ಯಗಳಿಂದ ರೋಗ ದೂರ: ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ಪಾಶ್ಚಿಮಾತ್ಯ ದೇಶಗಳ ಆಹಾರ ಪದ್ಧತಿ ಅನುಕರಣೆಯಿಂದ ಕಿಡ್ನಿ ಸಮಸ್ಯೆ, ಮಧುಮೇಹ, ಕ್ಯಾನ್ಸರ್ ಮತ್ತಿತರ ರೋಗಗಳಿಂದ ನಾವು ಬಳಲುತ್ತಿದ್ದೇವೆ. ಆದ್ದರಿಂದ ಸಿರಿಧಾನ್ಯ ಹಾಗೂ ಸಾವಯವ ಆಹಾರ ಸೇವನೆಯ ಮೂಲಕ ಆರೋಗ್ಯ ‌ರಕ್ಷಿಸಿಕೊಳ್ಳಬೇಕು’ ಎಂದರು.

‘ನಮ್ಮ ಹಿರಿಯರು ಯಾವುದೇ ಕ್ರಿಮಿನಾಶಕ ಮತ್ತು ರಾಸಾಯನಿಕ ಗೊಬ್ಬರವನ್ನು ಬಳಸದೇ ಎಲ್ಲ ಬೆಳೆಗಳನ್ನು ಬೆಳೆಯುತ್ತಿದ್ದರು. ಇದರಿಂದ ಆರೋಗ್ಯವಾಗಿದ್ದರು. ನಾವು ಪರಕೀಯರ ಪದ್ಧತಿ ಅನುಕರಣೆ ಮಾಡುತ್ತಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗಿದ್ದೇವೆ’ ಎಂದರು.

ಶಾಸಕ ಅನಿಲ್ ಬೆನಕೆ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ ನಿತೀಶ್ ಕೆ. ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ.ದರ್ಶನ್, ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಎಸ್. ಪಾಟೀಲ, ಕೃಷಿಕ ಸಮಾಜದ ಬೆಳಗಾವಿ ಜಿಲ್ಲಾಧ್ಯಕ್ಷ ಟಿ.ಎಸ್. ಮೋರೆ, ಕೃಷಿಕ ಸಮಾಜದ ಬೆಂಗಳೂರಿನ ವಿಭಾಗೀಯ ಕಾರ್ಯಕಾರಿ ಸದಸ್ಯ ನಾರಾಯಣ ಚ. ಕಲಾಲ ಅತಿಥಿಗಳಾಗಿ ಪಾಲ್ಗೊಂಡರು.

ಸಮಾರೋಪ: ಶುಕ್ರವಾರ ಸಂಜೆ ಸಮಾರೋಪ ಸಮಾರಂಭ ನಡೆಯಿತು. ಎರಡೂ ದಿನಗಳ ಕಾಲ ವಿವಿಧ ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದವು. ವಿಜ್ಞಾನಿಗಳು ಸಾವಯವ ಕೃಷಿ ಬಗ್ಗೆ ಉಪನ್ಯಾಸ ನೀಡಿದರು. ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.