ADVERTISEMENT

ಸ್ಮಾರ್ಟ್‌ ಸಿಟಿ ಯೋಜನೆ ; ಅವೈಜ್ಞಾನಿಕ ಕಾಮಗಾರಿಗಳ ಅಳವಡಿಕೆ– ಆರೋಪ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2018, 17:16 IST
Last Updated 25 ಆಗಸ್ಟ್ 2018, 17:16 IST
ಬೆಳಗಾವಿಯಲ್ಲಿ ಶನಿವಾರ ನಡೆದ ಸ್ಮಾರ್ಟ್‌ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಶಾಸಕ ಅಭಯ ಪಾಟೀಲ, ಸಂಸದ ಸುರೇಶ ಅಂಗಡಿ, ಜಿಲ್ಲಾಧಿಕಾರಿ ಜಿಯಾವುಲ್ಲಾ, ಶಾಸಕರಾದ ಸತೀಶ ಜಾರಕಿಹೊಳಿ, ಅನಿಲ ಬೆನಕೆ, ಲಕ್ಷ್ಮಿ ಹೆಬ್ಬಾಳಕರ, ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಉಪಸ್ಥಿತರಿದ್ದರು
ಬೆಳಗಾವಿಯಲ್ಲಿ ಶನಿವಾರ ನಡೆದ ಸ್ಮಾರ್ಟ್‌ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಶಾಸಕ ಅಭಯ ಪಾಟೀಲ, ಸಂಸದ ಸುರೇಶ ಅಂಗಡಿ, ಜಿಲ್ಲಾಧಿಕಾರಿ ಜಿಯಾವುಲ್ಲಾ, ಶಾಸಕರಾದ ಸತೀಶ ಜಾರಕಿಹೊಳಿ, ಅನಿಲ ಬೆನಕೆ, ಲಕ್ಷ್ಮಿ ಹೆಬ್ಬಾಳಕರ, ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಉಪಸ್ಥಿತರಿದ್ದರು   

ಬೆಳಗಾವಿ:‘ಬೆಳಗಾವಿ ಸ್ಮಾರ್ಟ್‌ಸಿಟಿ ಕನ್ಸ್‌ಲ್ಟನ್ಸಿ ಕಂಪೆನಿಯೇ ಸರಿಯಾಗಿಲ್ಲ. ಸ್ಮಾರ್ಟ್‌ಸಿಟಿ ಯೋಜನೆಯಡಿ ರೂಪಿಸಿದ ಕ್ರಿಯಾಯೋಜನೆಗಳು ಸಂಪೂರ್ಣ ಅವೈಜ್ಞಾನಿಕವಾಗಿವೆ. ಅನುಪಯುಕ್ತ ಯೋಜನೆಗಳನ್ನು ಕೈ ಬಿಟ್ಟು ಅಗತ್ಯ ಕಾಮಗಾರಿ ಕೈಗೊಳ್ಳಬೇಕು’ ಎಂದು ಶಾಸಕ ಅಭಯ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸ್ಮಾರ್ಟ್‌ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು.

2016ರಲ್ಲಿ ಕೇಂದ್ರ ಸರ್ಕಾರ ಸ್ಮಾರ್ಟ್‌ಸಿಟಿ ಯೋಜನೆ ಆರಂಭಿಸಿದಾಗ ಕ್ರಿಯಾಯೋಜನೆಗಳನ್ನು ರೂಪಿಸಲಾಗಿತ್ತು. ಸ್ಮಾರ್ಟ್‌ಸಿಟಿ ಯೋಜನೆಯಡಿ ಎಬಿಡಿ (ಏರಿಯಾ ಬೇಸ್ಡ್ ಡೆವಲಪ್‌ಮೆಂಟ್) ಪ್ರದೇಶವನ್ನು ಶೇ 80ರಷ್ಟು ಉತ್ತರ ಕ್ಷೇತ್ರಕ್ಕೆ ಆಯ್ಕೆ ಮಾಡಲಾಗಿದ್ದು, ದಕ್ಷಿಣ ಕ್ಷೇತ್ರಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ADVERTISEMENT

‘ಟಿಳಕವಾಡಿಯಲ್ಲಿ ನಿರ್ಮಿಸುತ್ತಿರುವ ಆಡಿಟೋರಿಯಂ ಎರಡನೇ ಮಹಡಿಯಲ್ಲಿ ನಿರ್ಮಿಸಿದರೆ ಒಳ್ಳೆಯದು. ಮೂರನೇ ಮಹಡಿಯಲ್ಲಿಯೇ ನಿರ್ಮಿಸುವುದಾದರೆ ನನ್ನನ್ನು ಯಾವುದಕ್ಕೂ ಕರೆಯಬೇಡಿ’ ಎಂದು ಅಭಯ ಪಾಟೀಲ ಹೇಳಿದರು.

ಅವರನ್ನು ಸಮಾಧಾನ ಪಡಿಸಲು ಶಾಸಕ ಸತೀಶ ಜಾರಕಿಹೊಳಿ ಪ್ರಯತ್ನಿಸಿದರು. ರಸ್ತೆಗಳನ್ನು ಬೇರೆ ಅನುದಾನಗಳಿಂದ ಅಭಿವೃದ್ಧಿ ಮಾಡಬಹುದು. ಬೇರೆ ಕೆಲಸಗಳಿಗೆ ಅನುದಾನ ಕ್ರೋಡೀಕರಣ ಆಗಬೇಕಾಗುತ್ತದೆ. ಮುಂದೆ ಸರಿಪಡಿಸೋಣ ಎಂದರು.

ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಬರುವ ಪಾಲಿಕೆ ಮೂರು ವಾರ್ಡ್‌ಗಳಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಒತ್ತಾಯಿಸಿದರು. ಉತ್ತರ ಕ್ಷೇತ್ರದ ಯೋಜನೆಗಳನ್ನು ಕಸಿದುಕೊಳ್ಳದೆ ಉಳಿದ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡುವಂತೆ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ವಿನಂತಿಸಿದರು.

ಪಾಲಿಕೆ ಆಯುಕ್ತ ಶಶಿಧರ ಕುರೇರ್ ಮಾತನಾಡಿ, 2016ರಲ್ಲಿ ಸ್ಮಾರ್ಟ್‌ಸಿಟಿ ಕ್ರಿಯಾ ಯೋಜನೆ ರಚನೆಯಾಗಿದೆ. ಅಂದಿನಿಂದ ಸಾಕಷ್ಟು ಬಾರಿ ಸಭೆಗಳನ್ನು ನಡೆಸಲಾಗಿದೆ. ಸಲಹೆಗಳನ್ನು ಪಡೆಯಲಾಗಿದೆ. ಈಗ ಕ್ರಿಯಾಯೋಜನೆ ಬದಲಾದರೆ ಮತ್ತೆ ಸಮಸ್ಯೆ ಆಗುತ್ತದೆ. ಎಬಿಡಿ ಹೊರತಾದ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿಗೆ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇದೆ ಎಂದರು.

ಬೆಳಗಾವಿ ಸ್ಮಾರ್ಟ್ ಸಿಟಿ ₹ 3,871 ಕೋಟಿ ವೆಚ್ಚದ ಯೋಜನೆಯಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಈವರೆಗೆ ₹ 396 ಕೋಟಿ ಬಿಡುಗಡೆಯಾಗಿದೆ. ಸಲಹಾ ಸಮಿತಿಗೆ ನಾಲ್ಕು ಜನ ಹೆಚ್ಚುವರಿ ಡೈರೆಕ್ಟರ್ ಆಗಿ ಪಾಲಿಕೆ ಸದಸ್ಯರ ಆಯ್ಕೆ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಸ್ಮಾಟ್‌ಸಿಟಿ ಕಾರ್ಪೊರೇಶನ್ ಲಿಮಿಟೆಡ್‌ನ 30 ಹುದ್ದೆಗಳ ಪೈಕಿ ಸಹಾಯಕ ಎಂಜಿನಿಯರ್ ಸೇರಿ 2 ಮುಖ್ಯ ಹುದ್ದೆಗಳು ಖಾಲಿ ಇದ್ದು, ಉಳಿದಂತೆ ಸಿಬ್ಬಂದಿ ಕೊರತೆ ಇಲ್ಲ ಎಂದರು.

ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಉಪಸ್ಥಿತರಿದ್ದರು.

ಸಲಹೆಗಳು: ಸ್ಮಾರ್ಟ್‌ಸಿಟಿ ಸಮಿತಿಗೆ ಸ್ಥಳಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸೇರಿಸಬೇಕು. ಸಮಿತಿಗೆ ಜಿಲ್ಲಾಧಿಕಾರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು. ಪ್ರಧಾನ ಮಂತ್ರಿ ಆವಾಸ್ ಯೋಜನೆ ಪರಿವರ್ತನೆ ಮಾಡಿ ಸ್ಮಾರ್ಟ್‌ಸಿಟಿಯಡಿ ಮನೆ ವಿತರಿಸಬೇಕು.

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಬಿಮ್ಸ್‌) ಟ್ರಾಮಾ ಸೆಂಟರ್ ನಿರ್ಮಾಣ ಮಾಡಬೇಕು. ನಗರದಲ್ಲಿ ಮೊಹಲ್ಲಾ ಕ್ಲಿನಿಕ್. ಗಣಪತಿಗಲ್ಲಿ, ರಾಮದೇವಗಲ್ಲಿ, ಮಾರುತಿಗಲ್ಲಿ, ಖಡೇಬಜರ್ ಮಾರುಕಟ್ಟೆ ಮಧ್ಯೆರಾತ್ರಿಯವರೆಗೆ ನಡೆಸಲು ಅನುವು ಮಾಡಿಕೊಡಬೇಕು ಹಾಗೂ ಪ್ರತಿ ಎರಡು ತಿಂಗಳಿಗೊಮ್ಮೆ ಸ್ಮಾರ್ಟ್‌ಸಿಟಿ ಸಲಹಾ ಸಮಿತಿ ಸಭೆ ನಡೆಸಬೇಕು ಎನ್ನುವ ಸಲಹೆಗಳು ಕೇಳಿಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.