ADVERTISEMENT

₹ 2.50 ಕೋಟಿಯಲ್ಲಿ ಅತ್ಯಾಧುನಿಕ ಗ್ರಂಥಾಲಯ- ಸೆ.26ರಂದು ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 7:43 IST
Last Updated 25 ಸೆಪ್ಟೆಂಬರ್ 2021, 7:43 IST
ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಶಿವಾಜಿ ಉದ್ಯಾನ ಸಮೀಪ ನಿರ್ಮಿಸಿರುವ ಇ–ಗ್ರಂಥಾಲಯದ ಬಗ್ಗೆ ಶಾಸಕ ಅಭಯ ಪಾಟೀಲ ಹಾಗೂ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದರುಪ್ರಜಾವಾಣಿ ಚಿತ್ರ
ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಶಿವಾಜಿ ಉದ್ಯಾನ ಸಮೀಪ ನಿರ್ಮಿಸಿರುವ ಇ–ಗ್ರಂಥಾಲಯದ ಬಗ್ಗೆ ಶಾಸಕ ಅಭಯ ಪಾಟೀಲ ಹಾಗೂ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದರುಪ್ರಜಾವಾಣಿ ಚಿತ್ರ   

ಬೆಳಗಾವಿ: ‘ನಗರದ ಎಸ್‌ಪಿಎಂ ರಸ್ತೆಯ ಛತ್ರಪತಿ ಶಿವಾಜಿ ಉದ್ಯಾನದ ಬಳಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ₹ 2.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ‘ರವೀಂದ್ರ ಕೌಶಿಕ್ ಇ–ಗ್ರಂಥಾಲಯ’ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ.26ರಂದು ಬೆಳಿಗ್ಗೆ 9ಕ್ಕೆ ಉದ್ಘಾಟಿಸಲಿದ್ದಾರೆ’ ಎಂದು ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ತಿಳಿಸಿದರು.

ಗ್ರಂಥಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕನ್ನಡ, ಮರಾಠಿ, ಹಿಂದಿ, ಉರ್ದು ಮತ್ತು ಇಂಗ್ಲಿಷ್ (ಪಂಚ) ಭಾಷೆಗಳನ್ನು ಬೆಂಬಲಿಸುವ ಹಾಗೂ ಮಾನವ ಮತ್ತು ಕೃತಕ ಬುದ್ಧಿಮತ್ತೆಯ ಪುಸ್ತಕಗಳನ್ನು (ಸಾಮಗ್ರಿಗಳನ್ನು) ಹೊಂದಿರುವ ಪ್ರಥಮ ಸಾರ್ವಜನಿಕ ಗ್ರಂಥಾಲಯ ಇದಾಗಿದೆ’ ಎಂದು ಮಾಹಿತಿ ನೀಡಿದರು.

ವಿಶೇಷಗಳೇನು?:

ADVERTISEMENT

‘ಮಾದರಿಯಾದ ಸಾರ್ವಜನಿಕ ಗ್ರಂಥಾಲಯ ಇದಾಗಿದೆ. ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಸೇರಿದಂತೆ ಎಲ್ಲ ಆಸಕ್ತರೂ ಇದನ್ನು ಬಳಸಿಕೊಳ್ಳಬಹುದಾಗಿದೆ. ಎಲ್ಲ ಸೌಲಭ್ಯಗಳೂ ಉಚಿತವಾಗಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತಿದೆ. ಸ್ಮಾರ್ಟ್‌ ಡಿಜಿಟಲ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್‌ ಅಳವಡಿಸಲಾಗಿದೆ. ನಗರ ಕೇಂದ್ರ ಗ್ರಂಥಾಲಯದ ಸರ್ವರ್ ವ್ಯವಸ್ಥೆ ಇದೆ. ಇಬ್ಬರು ಸಿಬ್ಬಂದಿ ನಿರ್ವಹಿಸುತ್ತಾರೆ’ ಎಂದು ವಿವರಿಸಿದರು.

‘ಮೊದಲ ಮಹಡಿಯಲ್ಲಿ ವೈ–ಫೈ ಸೌಲಭ್ಯದೊಂದಿಗೆ 23 ಕಂಪ್ಯೂಟರ್‌ಗಳು, 5 ಟ್ಯಾಬ್‌ಗಳ ವ್ಯವಸ್ಥೆ ಇದೆ. 42 ಇಂಚಿನ ಒಂದು ಎಲ್‌ಇಡಿ ಪರದೆ ಮತ್ತು 8 ಎನ್‌ವಿಆರ್‌ಗಳಿವೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಇ–ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ವ್ಯವಸ್ಥೆ ಇದೆ. ಆಸಕ್ತರು ಇಲ್ಲಿಯೇ ಕುಳಿತು ಓದಬಹುದು. ಡೌನ್‌ಲೋಡ್ ಮಾಡಿಕೊಳ್ಳಲೂಬಹುದು. ಆಫ್‌ಲೈನ್‌ನಲ್ಲೂ ಡೌನ್‌ಲೋಡ್‌ಗೆ ಅವಕಾಶವಿದೆ. ಈ ಗ್ರಂಥಾಲಯದ ಮೊಬೈಲ್ ಫೋನ್ ಆ್ಯಪ್ ಕೂಡ ಅಭಿವೃದ್ಧಿಪಡಿಸಲಾಗಿದ್ದು, ಅದನ್ನೂ ಬಳಸಬಹುದು’ ಎಂದು ತಿಳಿಸಿದರು.

ವೈ–ಫೈ ವ್ಯವಸ್ಥೆ:‘ನೆಲ ಅಂತಸ್ತಿನಲ್ಲಿ ಎಲ್ಲ ವಯೋಮಾನದವರೂ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳನ್ನು ಓದಬಹುದು. ಸಾಂಪ್ರದಾಯಿಕ ಕಲಿಕೆಯ ಜೊತೆಗೆ 1ನೇ ಮಹಡಿಯಲ್ಲಿ ಡಿಜಿಟಲ್ ಉಪಕರಣ ಹಾಗೂ ಕಲಿಕಾ ಸಾಮಗ್ರಿಗಳೊಂದಿಗೆ ಓದಲು ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದೆ. ಟೆರೇಸ್‌ನಲ್ಲೂ ಓದಲು ಆಸನಗಳು ಇರಲಿವೆ. ವೈ–ಫೈ ಬಳಸಿ ತಮ್ಮ ಉಪಕರಣಗಳ ಮೂಲಕ ಅಥವಾ ಟ್ಯಾಬ್‌ಗಳನ್ನು ಬಳಸಿ ಅಭ್ಯಾಸ ಮಾಡಬಹುದಾಗಿದೆ’ ಎನ್ನುತ್ತಾರೆ ಅವರು.

‘ಮಹಾತ್ಮ ಫುಲೆ ಉದ್ಯಾನದಲ್ಲಿ ಅಂಗವಿಕಲರು, ವಿಶೇಷ ಮಕ್ಕಳು ಹಾಗೂ ಅವರ ಪಾಲಕರಿಗೆ ಅಭಿವೃದ್ಧಿಪಡಿಸಿರುವ ಪ್ರತ್ಯೇಕ ಉದ್ಯಾನ ಮತ್ತು ಚಿಕಿತ್ಸಾ ಕೇಂದ್ರವನ್ನೂ ಮುಖ್ಯಮಂತ್ರಿ ಉದ್ಘಾಟಿಸುವರು. ಈ ಉದ್ಯಾನದ ಸಮಗ್ರ ಅಭಿವೃದ್ಧಿಗೆ ₹ 2.70 ಕೋಟಿ ವೆಚ್ಚವಾಗಿದೆ. ಇಂತಹ ಮಕ್ಕಳಿಗೆಂದೇ ಪ್ರತ್ಯೇಕವಾಗಿ ರೂಪಿಸಿದ ಮೊದಲ ಉದ್ಯಾನ ಇದಾಗಿದೆ. ಚಿಕಿತ್ಸೆ ಮತ್ತು ಮನರಂಜನೆಗೆ ಅಗತ್ಯವಾದ ಉಪಕರಣಗಳಿವೆ. ಆ ಮಕ್ಕಳು ಹಾಗೂ ಪೋಷಕರು ಮುಜುಗರ ಇಲ್ಲದೆ ಬರಬಹುದು. ಸಂಪನ್ಮೂಲ ವ್ಯಕ್ತಿಗಳು ಮತ್ತು ತಜ್ಞರ ಸಲಹೆಯ ಆಧರಿಸಿ ಇದನ್ನು ರೂಪಿಸಲಾಗಿದೆ’ ಎಂದು ತಿಳಿಸಿದರು.

ಸ್ಮಾರ್ಟ್‌ ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ ಬಾಗೇವಾಡಿ ಇದ್ದರು.

**

ಐಟಿ ಪಾರ್ಕ್‌ಗೆ ಪ್ರಸ್ತಾವ

ಬೆಳಗಾವಿಯಲ್ಲಿ ₹774 ಕೋಟಿ ವೆಚ್ಚದಲ್ಲಿ ಐ.ಟಿ.ಪಾರ್ಕ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಕುರಿತು ರಕ್ಷಣಾ ಸಚಿವರ ಜೊತೆಗೂ ಚರ್ಚಿಸಲಾಗಿದೆ. ಒಂದು ಲಕ್ಷ ಮಂದಿಗೆ ಉದ್ಯೋಗ ದೊರೆಯಲಿದೆ.

–ಅಭಯ ಪಾಟೀಲ, ಶಾಸಕ, ದಕ್ಷಿಣ ಮತ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.