ADVERTISEMENT

ಪಾಶ್ಚಾಪೂರ: ನಿವಾರಣೆಯಾಗದ ನೆರೆ ಸಂಕಷ್ಟ!

ಸಾಮಾಜಿಕ ಹೋರಾಟಗಾರರಿಂದ ಜಿಲ್ಲಾಡಳಿತಕ್ಕೆ ಸಮೀಕ್ಷಾ ವರದಿ ಸಲ್ಲಿಕೆ

ಎಂ.ಮಹೇಶ
Published 15 ಡಿಸೆಂಬರ್ 2019, 19:30 IST
Last Updated 15 ಡಿಸೆಂಬರ್ 2019, 19:30 IST
ಹುಕ್ಕೇರಿ ತಾಲ್ಲೂಕು ಪಾಶ್ಚಾಪೂರದಲ್ಲಿ ಮನೆ ಬಿದ್ದಿದೆ
ಹುಕ್ಕೇರಿ ತಾಲ್ಲೂಕು ಪಾಶ್ಚಾಪೂರದಲ್ಲಿ ಮನೆ ಬಿದ್ದಿದೆ   

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪೂರ ಗ್ರಾಮದಲ್ಲಿ ನೆರೆ ಮತ್ತು ಅತಿವೃಷ್ಟಿಯಿಂದ ಉಂಟಾದ ಸಂಕಷ್ಟಗಳಿಂದ ಜನರು ಅತಂತ್ರರಾಗಿದ್ದಾರೆ. ನಾಲ್ಕೂವರೆ ತಿಂಗಳಾದರೂ ಸೂಕ್ತ ಪರಿಹಾರ ದೊರೆಯದೇ ಹಲವು ಸಂತ್ರಸ್ತರು ಪರದಾಡುತ್ತಿದ್ದಾರೆ.

ಮಕ್ಕಳ ಹಕ್ಕುಗಳ ರಕ್ಷಣೆಯ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ದಿ ಕನ್ಸರ್ನ್ಡ್ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ (ಸಿಡಬ್ಯುಸಿ) ಸಂಸ್ಥೆ ಪ್ರತಿನಿಧಿಗಳು, ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕೂಲಿಕಾರ್ಮಿಕರ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಜಾಗೃತ ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಕಾರ್ಯಕರ್ತರು ನಡೆಸಿದ ಸಮೀಕ್ಷೆಯಲ್ಲಿ ಈ ಪ್ರಮುಖ ಅಂಶವನ್ನು ಗುರುತಿಸಿದ್ದಾರೆ. ಈಚೆಗೆ ವರದಿಯನ್ನು ಜಿಲ್ಲಾಡಳಿತಕ್ಕೂ ಸಲ್ಲಿಸಿ, ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ನೆರವು ಸಿಕ್ಕಿಲ್ಲ:ಈ ಗ್ರಾಮದಲ್ಲಿ 280ಕ್ಕೂ ಹೆಚ್ಚಿನ ಮನೆಗಳು ಬಿದ್ದಿವೆ. ಅನೇಕರ ಬಳಿ ದಾಖಲೆಗಳು ಸರಿಯಾಗಿಲ್ಲದೇ ಯಾವುದೇ ಪರಿಹಾರ ದೊರೆತಿಲ್ಲ. ಕಾನೂನಾತ್ಮಕ ಸಲಹೆ ಅಥವಾ ಮಾರ್ಗದರ್ಶನ ಸಿಗದೇ ದಿಕ್ಕು ತೋಚದಂತಾಗಿದ್ದಾರೆ. ಮನೆ ಕಳೆದುಕೊಂಡವರಲ್ಲಿ ಅನೇಕರು ಹಿರಿಯ ನಾಗರಿಕರಾಗಿದ್ದಾರೆ. ಅವರಿಗೆ ಪ್ರತಿ ಹೆಜ್ಜೆಗೂ ಸಹಾಯ, ಬೆಂಬಲದ ಅಗತ್ಯವಿದ್ದು, ಅದನ್ನು ಯಾರೂ ನೀಡುತ್ತಿಲ್ಲ. ಹೊಸ ಬದುಕು ಕಟ್ಟಿಕೊಳ್ಳಲು ಸಂತ್ರಸ್ತರು ಹೆಣಗಾಡುತ್ತಿರುವುದು ಕಂಡುಬಂದಿದೆ.

ADVERTISEMENT

‘ಅಲ್ಲಿ ಶಾಲಾ ಕೊಠಡಿಗಳು ಬಿದ್ದಿವೆ ಅಥವಾ ಶಿಥಿಲಗೊಂಡಿವೆ. ಕೊಠಡಿಗಳ ಅಭಾವದಿಂದಾಗಿ ವೇಳಾಪಟ್ಟಿ ಪ್ರಕಾರ ಮಕ್ಕಳಿಗೆ ಪಾಠ ಬೋಧನೆ ಸಾಧ್ಯವಾಗುತ್ತಿಲ್ಲ. ಶಿಕ್ಷಕರು, ಎರಡು ತಂಡಗಳಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. 2 ಮತ್ತು 3ನೇ ತರಗತಿಯ ಮಕ್ಕಳನ್ನು ಒಂದೇ ಕೋಣೆಯಲ್ಲಿ ಕೂರಿಸಿ ಪಾಠ ಹೇಳಲಾಗುತ್ತಿದೆ. ಹೀಗಾಗಿ, ಸಮರ್ಪಕ ಕಲಿಕೆ ಸಾಧ್ಯವಾಗದೇ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಶಿಕ್ಷಕರು ಅಸಹಾಯಕರಾಗಿದ್ದಾರೆ. ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುವಲ್ಲಿ ಆದ್ಯತೆ ಕಂಡುಬಂದಿಲ್ಲ’ ಎಂದು ಸಿಡಬ್ಲ್ಯುಸಿ ನಿರ್ದೇಶಕಿ ಕವಿತಾ ರತ್ನ ಹಾಗೂ ಜಾಗೃತ ಮಹಿಳಾ ಒಕ್ಕೂಟದ ಶಾರದಾ ಗೋ‍ಪಾಲ ಹೇಳುತ್ತಾರೆ.

ಕಲಿಕೆ ಮೇಲೆ ‍ಪರಿಣಾಮ:‘ಶಾಲೆಗಳಿಗೆ ಸರ್ಕಾರದಿಂದ ₹ 25ಸಾವಿರ ಅನುದಾನ ನೀಡಲಾಗುತ್ತಿದೆ. ಈ ಹಣದಲ್ಲಿ ಶಾಲಾ ಕೊಠಡಿಗಳ ದುರಸ್ತಿ ಸಾಧ್ಯವಾಗುತ್ತಿಲ್ಲ. ಶಾಲೆಯ ದುಃಸ್ಥಿತಿಯು ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಕಟ್ಟಡಗಳ ದುರಸ್ತಿ ಅಥವಾ ನಿರ್ಮಾಣ ಶೀಘ್ರವಾಗಿ ಆಗದಿದ್ದಲ್ಲಿ ಮಕ್ಕಳ ಕಲಿಕೆಯು ಕುಂಠಿತಗೊಳ್ಳುತ್ತದೆ’ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.

‘ಮನೆ ಹಾನಿ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲದಿರುವುದು ಗ್ರಾಮಸ್ಥರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಏಕೆಂದರೆ, ಬಹಳ ಹಾನಿಯಾದ ಮನೆಗಳನ್ನು ‘ಸಿ’ ವರ್ಗಕ್ಕೆ, ಕಡಿಮೆ ಹಾನಿಯಾದವುಗಳನ್ನು ‘ಎ’ ವರ್ಗಕ್ಕೆ ಸೇರಿಸಲಾಗಿದೆ! ಇದರಿಂದ ನೈಜ ಸಂತ್ರಸ್ತರಿಗೆ ಸರ್ಕಾರದಿಂದ ಸಮರ್ಪಕ ಪರಿಹಾರ ದೊರಕಿಸಿದಂತಾಗುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನಹರಿಸಬೇಕು. ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಅಳಲು ಆಲಿಸಬೇಕು’ ಎಂದು ಒತ್ತಾಯಿಸುತ್ತಾರೆ ಅವರು.

*
ಪಾಶ್ಚಾಪೂರದಲ್ಲಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡವರಿಗೆ ಸಮರ್ಪಕ ಪರಿಹಾರ ದೊರೆತಿಲ್ಲ. ಅವರ ಸಂಕಷ್ಟಗಳನ್ನು ನೋಡಿದಾಗ ನೋವಾಗುತ್ತದೆ.
–ಶಿವಾಜಿ ಕಾಗಣೀಕರ, ಸಾಮಾಜಿಕ ಕಾರ್ಯಕರ್ತ

*
ನೆರೆ ಸಂತ್ರಸ್ತ ಕುಟುಂಬಗಳ ಪ್ರತಿ ವ್ಯಕ್ತಿಗೆ ಉದ್ಯೋಗ ಖಾತ್ರಿ ಯೋಜನೆಯಡಿ 150 ದಿನ ಕೆಲಸ ನೀಡಬೇಕು. ಸಕಾಲಕ್ಕೆ ಕೂಲಿ ಪಾವತಿಸಬೇಕು ಎನ್ನುವುದು ನಮ್ಮ ಹಕ್ಕೊತ್ತಾಯವಾಗಿದೆ.
–ಕವಿತಾ ರತ್ನ, ನಿರ್ದೇಶಕರು, ಸಿಡಬ್ಲ್ಯುಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.