ADVERTISEMENT

ಜಾತಿ ಗಣತಿಯಲ್ಲ| ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 4:52 IST
Last Updated 1 ಅಕ್ಟೋಬರ್ 2025, 4:52 IST
ಬೆಳಗಾವಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಭಿನವ ಜೈನ, ಮೊಹಮ್ಮದ್‌ ರೋಷನ್‌, ಸಿ.ಎಂ.ಕುಂದಗೋಳ, ವಿಪುಲ್‌ ಬನ್ಸಾಲ್‌, ರಾಹುಲ್‌ ಶಿಂಧೆ ಪಾಲ್ಗೊಂಡಿದ್ದರು
ಬೆಳಗಾವಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಭಿನವ ಜೈನ, ಮೊಹಮ್ಮದ್‌ ರೋಷನ್‌, ಸಿ.ಎಂ.ಕುಂದಗೋಳ, ವಿಪುಲ್‌ ಬನ್ಸಾಲ್‌, ರಾಹುಲ್‌ ಶಿಂಧೆ ಪಾಲ್ಗೊಂಡಿದ್ದರು   

ಬೆಳಗಾವಿ: ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾರ್ಗಸೂಚಿಯಂತೆ ನಡೆಸುತ್ತಿರುವ ಸಮೀಕ್ಷೆಯು ಜಾತಿ ಗಣತಿ ಎಂದು ಪ್ರಚಾರ ಪಡೆಯುತ್ತಿದೆ. ಆದರೆ, ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೇ ಹೊರತು, ಜಾತಿ ಗಣತಿಯಲ್ಲ’ ಎಂದು ಆಯೋಗದ ಸದಸ್ಯ ಸಿ.ಎಂ.ಕುಂದಗೋಳ ಸ್ಪಷ್ಟಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

‘ಕೆಲವು ತಾಂತ್ರಿಕ ಸಮಸ್ಯೆಗಳಿಂದ ಆರಂಭದಲ್ಲಿ ಸಮೀಕ್ಷೆಗೆ ತೊಡಕಾಗಿತ್ತು. ಉಪಜಾತಿ ಕಾಲಂನಲ್ಲಿ ನಮೂದಿಸುವಾಗ ತಾಂತ್ರಿಕ ತೊಂದರೆ ಆಗುತ್ತಿರುವ ಕುರಿತು ದೂರು ಬಂದಿದ್ದವು. ಈಗ ಎಲ್ಲ ಸಮಸ್ಯೆ ಬಗೆಹರಿಸಲಾಗಿದೆ’ ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಾಲ್, ‘ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತೇವೆ ಎಂಬ ಭಯದಿಂದ ಕೆಲವರು ಸಮೀಕ್ಷೆ ವೇಳೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಸಮೀಕ್ಷಕರು ತಿಳಿಸಿದ್ದಾರೆ. ಅಂಥವರಿಗೆ ಮತ್ತೊಮ್ಮೆ ತಿಳಿವಳಿಕೆ ಮೂಡಿಸಿ, ಸರಿಯಾಗಿ ಮಾಹಿತಿ ಕಲೆಹಾಕಿ ಸಮೀಕ್ಷೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಖಾನಾಪುರ ತಾಲ್ಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ಸಮೀಕ್ಷೆಗೆ ತಾಂತ್ರಿಕ ತೊಂದರೆ ಎದುರಾಗುತ್ತಿವೆ. ಆದರೂ, ಸಮೀಕ್ಷಕರು ಪ್ರತಿ ಮನೆಗೆ ತೆರಳಿ ಅಚ್ಚುಕಟ್ಟಾಗಿ ಸಮೀಕ್ಷೆ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ, ‘ಸಮೀಕ್ಷೆ ವೇಳೆ ಕೆಲವರು ಆರ್ಥಿಕತೆಗೆ ಸಂಬಂಧಿಸಿದ ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ’ ಎಂದು ವಿವರಿಸಿದರು.

ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ, ‘ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಸಮೀಕ್ಷೆಗೆ ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್‌.ಹರ್ಷ, ‘ಜಿಲ್ಲೆಯಲ್ಲಿ 11.85 ಲಕ್ಷ ಕುಟುಂಬಗಳಿವೆ. ನೆಟ್‌ವರ್ಕ್ ಸಮಸ್ಯೆ ಕಾರಣಕ್ಕೆ 16,711 ಕುಟುಂಬಗಳಿಗೆ ಶಿಬಿರದ ಮೂಲಕ ಸಮೀಕ್ಷೆ ನಡೆಸಲು ನಿರ್ಧರಿಸಿದ್ದೇವೆ. 10,200 ಸಮೀಕ್ಷಕರು ಕೆಲಸ ಮಾಡುತ್ತಿದ್ದು, ಜಿಲ್ಲೆಯಲ್ಲಿ ಈವರೆಗೆ ಶೇ 30.55 ಸಮೀಕ್ಷೆ ಪೂರ್ಣಗೊಂಡಿದೆ. ಹೆಚ್ಚುವರಿ 500 ಸಿಬ್ಬಂದಿ ನೀಡಿರುವುದರಿಂದ ಸಮೀಕ್ಷೆ ಚುರುಕುಗೊಂಡಿದೆ’ ಎಂದರು.

ಜಿಲ್ಲೆಯಲ್ಲಿ ಶೇ 100ರಷ್ಟು ಸಮೀಕ್ಷೆ ಕೆಲಸ ಪೂರ್ಣಗೊಳಿಸಿದ 36 ಸಮೀಕ್ಷಕರನ್ನು ಸನ್ಮಾನಿಸಲಾಯಿತು.

ಐಎಎಸ್‌ ಪ್ರೊಬೇಷನರಿ ಅಧಿಕಾರಿ ಅಭಿನವ ಜೈನ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಇತರರಿದ್ದರು.

ಸಮೀಕ್ಷೆ ವೇಳೆ ಕೆಲವರು ಆರ್ಥಿಕತೆಗೆ ಸಂಬಂಧಿಸಿದ ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ. ಇದು ತ‍ಪ್ಪು ಕಲ್ಪನೆ. ಪೂರ್ಣ ಮಾಹಿತಿ ನೀಡಬೇಕು
ರಾಹುಲ್‌ ಶಿಂಧೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯಿತಿ
ಖಾನಾಪುರ ತಾಲ್ಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ಸಮೀಕ್ಷೆಗೆ ತಾಂತ್ರಿಕ ತೊಂದರೆ ಎದುರಾಗುತ್ತಿವೆ. ಆದರೂ, ಸಮೀಕ್ಷಕರು ಪ್ರತಿ ಮನೆಗೆ ತೆರಳಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ
ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.