ರೇಣುಕಾ
ಬೆಳಗಾವಿ: ಇಲ್ಲಿನ ರೈತ ಗಲ್ಲಿಯಲ್ಲಿ ಮಂಗಳವಾರ, ಸಂಕ್ರಾಂತಿ ಹಬ್ಬದ ಬುತ್ತಿ ಕೊಡಲು ಬಂದಿದ್ದ ಅತ್ತೆಯನ್ನೇ ಅಳಿಯ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಕಲ್ಯಾಣ ನಗರದ ನಿವಾಸಿ ರೇಣುಕಾ ಶ್ರೀಧರ ಪಡುಮುಖೆ (44) ಕೊಲೆಯಾದವರು.
ಮಲ್ಲಪ್ರಭಾ ನಗರದ ನಿವಾಸಿ, ಸದ್ಯ ರೈತ ಗಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶುಭಂ ದತ್ತಾ ಬಿರ್ಜೆ (24) ಆರೋಪಿ.
ಕೌಟುಂಬಿಕ ಕಲಹ ವಿಕೋಪಕ್ಕೆ ಹೋಗಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಘಟನೆ ವಿವರ: ರೇಣುಕಾ ಅವರ ಪುತ್ರಿ ಛಾಯಾ ಮತ್ತು ಶುಭಂ ಮದುವೆ ಮೂರು ವರ್ಷಗಳ ಹಿಂದೆ ನಡೆದಿದೆ. ದಂಪತಿ ಮಧ್ಯೆ ಆಗಾಗ ತಂಟೆಗಳು ನಡೆಯುತ್ತಿದ್ದವು.
ಛಾಯಾ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಗಳನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂದು ರೇಣುಕಾ ಪದೇಪದೇ ತಕರಾರು ಮಾಡಿದ್ದರು.
ಸಂಕ್ರಾಂತಿ ಹಬ್ಬದ ಕಾರಣ ರೇಣುಕಾ ಅವರು ಮಗಳಿಗೆ ಬುತ್ತಿ ಕೊಡಲು ಬಂದಿದ್ದರು. ಈ ವೇಳೆ ಅತ್ತೆ- ಅಳಿಯನ ನಡುವೆ ಮಾತಿಗೆ ಮಾತು ಬೆಳೆದು, ವಿಕೋಪಕ್ಕೆ ಹೋಯಿತು. ಮನೆಯಲ್ಲಿದ್ದ ಚಾಕು ತೆಗೆದುಕೊಂಡು ರೇಣುಕಾ ಅವರ ತೊಡೆಗೆ ಚುಚ್ಚಿದ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು.
ಮೂವರ ಬಂಧನ: ಕೊಲೆ ಸಂಬಂಧ ಶುಭಂ ಹಾಗೂ ಅವರ ತಂದೆ- ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ರೋಹನ್ ಜಗದೀಶ್ ಪರಿಶೀಲನೆ ನಡೆಸಿದರು.ಶಹಾಪುರ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.